Monday, June 27, 2016

ಶಿರಾಡಿಯಲ್ಲಿ ಆ ಮೂರು ಗಂಟೆಗಳು !

ಬಾಯಾರಿದ ಬಯಕೆಗಳಲಿ ಥಳಥಳಿಸುವ ನೀರು  ಕಣ್ಣಿಗೆ ಥಣ್ಣಗೆ ಮುತ್ತಿಡುತಿದೆ ಪ್ರೀತಿಯಂತ ಹಸಿರು….

ಶಿರಾಡಿ ! ನೀವು ಈ ಹೆಸರು ಕೇಳಿಯೇ ಇದ್ದೀರಿ. ಬೆಂಗಳೂರಿನಿಂದ ಮಂಗಳೂರಿಗೆ ಹೋಗಬೇಕಾದರೆ, 38 ಕಿಲೋಮೀಟರ್ ಗಳ ರೌದ್ರ ಸೌಂದರ್ಯವನ್ನು ಅನುಭವಿಸಲೇಬೇಕು. ಅಂದ ಹಾಗೆ, ನನಗೆ ಶಿರಾಡಿಯೇನೂ ಹೊಸದಲ್ಲ. ಎಳೆವೆಯಲ್ಲಿ ಅಮ್ಮನ ಪಲ್ಲಂಗ ಹಿಡಿದುಕೊಂಡು ಓಡಾಡಿದಷ್ಟೇ ಸಲೀಸಾಗಿ ಶಿರಾಡಿಯ ಕಾಡುಗಳಲ್ಲಿ ಕಳೆದು ಹೋದ ದಿನಗಳಿಗೇನೂ ಕಡಿಮೆ ಇಲ್ಲ. ಸರಿಯಾಗಿ ಲೆಕ್ಕ ಹಾಕಿದರೆ ಬದುಕಿನ ಕಾಲು ಭಾಗವನ್ನು ಶಿರಾಡಿಯ ತಪ್ಪಲುಗಳಲ್ಲೇ ಕಳೆದಿರಬಹುದು.

ಶಿರಾಡಿ ಅಂದ್ರೆ ಅದೇನೋ ಖುಷಿ. ಅದ್ರಲ್ಲೂ ಮಳೆ ಬಿತ್ತೆಂದರೆ ಸಾಕು. ಶಿರಾಡಿ ಇದ್ದಕ್ಕಿದ್ದಂತೆ ಬದಲಾಗಿಬಿಡುತ್ತದೆ. ಒಣಗಿದ ಗಿಡಗಳು, ಮರಗಳು ಎಲ್ಲವೂ ಅದೆಲ್ಲಿಂದಲೋ ಅದೇನೋ ಆವೇಶ ಮೈಮೇಲೆ ಬಂದತೆ, ಇದ್ದಕ್ಕಿದ್ದಂತೆ ಚಿಗಿತು ಕೂತುಕೊಳ್ಳುತ್ತವೆ. ಮುಂಗಾರಿನ ರಭಸಕ್ಕೆ ಜೋಕಾಲಿಯಾಡುತ್ತವೆ.

ಅದೆಲ್ಲಿಂದಲೋ ಧೋ.. ಧೋ… ಎನ್ನುತ್ತಾ ಓಡಿ ಬರುತ್ತದೆ ಮಳೆ… 6 ತಿಂಗಳು ದೂರ ಹೋಗಿದ್ದ ಪ್ರೇಮಿಯನ್ನು ಕಾಣಲು ಪ್ರೇಯಸಿ ತಹತಹಿಸುತ್ತಾಳಲ್ಲಾ.. ಹಾಗೇ, ಕೆಂಪು ಹೊಳೆ ಕುಣಿದು ಕುಪ್ಪಳಿಸುತ್ತಾಳೆ. ಮಳೆರಾಯನ ಆನಂದ ಭಾಷ್ಪಗಳನ್ನು ಮೊಗೆಮೊಗೆದು ತನ್ನೊಳಗೆ ಸೆಳೆದುಕೊಳ್ಳುತ್ತಾಳೆ.. ಪ್ರಶಾಂತವಾಗಿ ಪ್ರಿಯಕರನಿಗಾಗಿ ಕಾಯುತ್ತಿದ್ದ ಕೆಂಪುಹೊಳೆ ಕುಣಿಕುಣಿದು ಭೋರ್ಗರೆಯುತ್ತಾಳೆ. ಆಕೆಯ ರೌದ್ರತಾಂಡವಕ್ಕೆ ಜೀಗುಂಬೆ, ಹಕ್ಕಿ, ಕೀಟಗಳೇ ತಾಳ ತಂಬೂರಿ. ಆ ರುದ್ರನರ್ತನವನ್ನು ಹೈವೇಯಲ್ಲಿ ನಿಂತು ನೋಡಿದರೆ, ಎದೆಯೊಳಗೆ ಭಯ ತವುಡುಗಟ್ಟದಿದ್ದರೆ ಹೇಳಿ.

ಹೇಳಿ ಕೇಳಿ ಇದು ಜೂನ್. ಆಗಲೇ ಶಿರಾಡಿ ನೆನೆದು ತೊಪ್ಪೆಯಾಗಿ ಹೋಗಿದೆ. ಈಗ ಹೈವೆ ಬಿಟ್ಟು ಆಚೀಚೆ ಹೋಗುವುದು ತುಂಬಾ ರಿಸ್ಕಿ ಕೆಲಸ. ಕಾಲಿಟ್ಟಲ್ಲೆಲ್ಲಾ ಜಾರುತ್ತೆ. ಅಷ್ಟೇ ಯಾಕೆ, ಘಾಟಿ ರಸ್ತೆಯಲ್ಲಿ ಅತಿ ವೇಗದಲ್ಲಿ ನಿಮ್ಮ ಕಾರು ಚಲಾಯಿಸುವುದು ಕೂಡಾ ತುಂಬಾ ರಿಸ್ಕೇ. ಕೊಂಚ ಯಾಮಾರಿದ್ರೂ, ಯಮಪುರಿಗೆ ಗೋಲ್ಡ್ ಪಾಸ್ ಸಿಕ್ಕಿಬಿಡುತ್ತೆ. ಅಲ್ಲಿಗೆ ಹೋಗೋದಾದ್ರೆ, ಇನ್ನೊಂದು ತಿಂಗಳು ಕಾಯಿರಿ. ಮಳೆಯ ಆರಂಭದ ಅಬ್ಬರ ಕಡಿಮೆಯಾಗಿರುತ್ತದೆ. ಆದರೆ ಮಳೆ ಪ್ರಮಾಣ ಅಷ್ಟೇ ಇರುತ್ತದೆ. ಕಾಡು ಆಲ್ ಮೋಸ್ಟ್ ಸ್ವಚ್ಛವಾಗಿರುತ್ತದೆ. ಅದೇ ರೈಟ್ ಟೈಂ.

ಕಾಡಿನಲ್ಲಿ ನಡೆಯೋದೇ ರಿಸ್ಕಿ ಅಂದ್ಕೊಂಡ್ರೆ ಬಿಟ್ಟುಬಿಡಿ. ಬೆಳಗ್ಗೆ ಬೆಂಗಳೂರಿನಿಂದ 7 ಗಂಟೆಗೆ ಕಾರವಾರಕ್ಕೆ ಹೊರಡೋ ಟ್ರೈನ್ ಹತ್ತಿಕೊಳ್ಳಿ. ಸಕಲೇಶಪುರ ದಾಟಿದ ಮೇಲೆ ಅಪ್ಪಿ ತಪ್ಪಿ ಕೂಡಾ ಕಣ್ಣು ಮುಚ್ಚಿಕೊಳ್ಳಬೇಡಿ. ಮುಚ್ಚಿದ್ರೆ, ನಿಮಗೆ ಜೀವನದಲ್ಲಿ ಮತ್ತೆಂದಿಗೂ ಸ್ವರ್ಗ ಸಿಗೋದಿಲ್ಲ. ಆದ್ರೆ ಒಂದೇ ಕಂಡೀಷನ್. ನಿಮಗೆ ಪ್ರಕೃತಿಯನ್ನು ಆಸ್ವಾದಿಸೋ ಮನಸ್ಸು ಇರಬೇಕು.



ಟ್ರೇನ್ ಬೇಡ ಅಂದ್ರೆ ಕಾರು ತೆಗೆದುಕೊಂಡು ಹೊರಟುಬಿಡಿ. ಸಕಲೇಶಪುರದಿಂದ ಸ್ವಲ್ಪ ದೂರ ಹೋದರೆ ದೋಣಿಗಲ್ ಸಿಗುತ್ತದೆ. ಅಲ್ಲಿ ಬಿಸಿ ಕಾಫಿಯೋ, ಟೀಯನ್ನೋ ಸೇವಿಸಿ, ಬೋಂಡಾ ಮೆಲ್ಲುತ್ತಾ ಹೊರಟುಬಿಡಿ, ಬೇಕಿದ್ದರೆ ಕೈಯಲ್ಲೊಂದಿಷ್ಟು ಚಿಪ್ಸ್ ಪ್ಯಾಕ್ ಇರಲಿ. ಮುಂದೆ ಬರೀ ಚಳಿ. ಕಣ್ಣುಬಿಟ್ಟರೆ ಕಾಣೋದು ಹಸಿರ ಪಾತಳಿ. ಅದನ್ನು ಮನಸಾರೆ ಅನುಭವಿಸಿ.

ಬೆಂಗಳೂರು ಬಿಟ್ಟರೆ, ಭರ್ತಿ ಮೂರುಗಂಟೆಗೆಲ್ಲಾ ದೋಣಿಗಲ್ ತಲುಪಿಬಿಡುತ್ತೇನೆ. ಅಲ್ಲಿ ಹರಿಯೋ ಸಣ್ಣ ಝರಿಯಲ್ಲಿ ಮುಖಕ್ಕೆ ನೀರು ಚಿಮ್ಮಿಸಿ, ಪಕ್ಕದಲ್ಲೇ ಕಾಫಿ-ಭಜ್ಜಿ ತಿನ್ನುತ್ತಾ 15 ನಿಮಿಷ ಕಳೆದುಬಿಡುತ್ತೇನೆ. ಅಲ್ಲಿಂದಾಚೆಗೆ ನನ್ನ ಕಾರು ಯಾಕೋ ವೇಗ ಒಲ್ಲೆ ಅನ್ನುತ್ತದೆ. ಹೈವೇ ಬದಿ ಸ್ವಲ್ಪ ಗ್ಯಾಪ್ ಕಂಡ್ರೂ ಕಾರು ಸರಕ್ಕನೆ ನಿಂತುಕೊಂಡು ಬಿಡುತ್ತದೆ. 38 ಕಿಲೋಮೀಟರ್ ತಲುಪಲು ಏನಿಲ್ಲವೆಂದರೂ ನಂಗೆ ಮೂರು ಗಂಟೆ ಬೇಕೇ ಬೇಕು. ಇಲ್ಲದಿದ್ರೆ ನನ್ನ ಕಾರು, ಕ್ಯಾಮೆರಾ ಕಣ್ಣು ಎರಡೂ ಠೂ ಬಿಟ್ಟುಬಿಡುತ್ತವೆ !

ಮೊನ್ನೆಮೊನ್ನೆಯಷ್ಟೇ ಮತ್ತೆ ಶಿರಾಡಿ ಮಡಿಲಲ್ಲಿದ್ದೆ. ಧರಣಿಗೆ ಬೆಂಬಿಡದೆ ಮುಂಗಾರಿನ ಅಭಿಷೇಕವಾಗುತ್ತಿತ್ತು. ಅದು ಅಕ್ಷರಶ: ಮಹಾಮಸ್ತಕಾಭಿಷೇಕ. ಒಮ್ಮೆ ಜಿಟಿಜಿಟಿ ಮತ್ತೊಮ್ಮೆ ಧೋ ಧೋ.. ಮತ್ತೆ ಜಿಟಿಜಿಟಿ ಆ ಮೂರು ಗಂಟೆಗಳಲ್ಲಿ ಕೇಳಿಸಿದ್ದು ಅದರದ್ದೇ ಸದ್ದು. ಮೂರು ಗಂಟೆಗಳಲ್ಲಿ ಅದೆಷ್ಟು ಬಾರಿ ನೆಂದಿದ್ದೆನೋ, ಅದೆಷ್ಟು ಬಾರಿ ಮಳೆಯ ಹೊಡೆದ ತಾಳಲಾರದೆ ಕಾರಿನ ಒಳಗೆ ಮುದುಡಿ ಕೂತಿದ್ದೆನೋ… ಅಂತಹದ್ದೊಂದು ಅನುಭವಕ್ಕೆ ಮೈಮರೆತು ತುಂಬಾ ದಿನಗಳೇ ಆಗಿದ್ದವು. ಆ ಮೂರು ಗಂಟೆಗಳು ಒಂದು ವರ್ಷಕ್ಕಾಗುವಷ್ಟು ಹಸಿಹಸಿ ಉತ್ಸಾಹ ತುಂಬಿಕೊಟ್ಟಿದ್ದವು.

ಅದು ಬರೀ ಮುಂಗಾರು ಮಳೆಯಲ್ಲ…  ಜೀವೋತ್ಸವ ಗಾನ.

ಮೈಮನಗಳ ಕೊಂಬೆಯಲ್ಲಿ ಹೊಮ್ಮುವ ದನಿ ಇಂಪು. ನಾಳೆಗೆ ನನಸಾಗುವ ಕನಸಿನ ಹೂವರಳುವ ಕಂಪು.






1 comment:

Pallavi Bhat said...

Well written.. ಅನುಭವಿಸಿದವರಿಗೆ ಮಾತ್ರ ತಿಳಿದಿರುವ ಆನಂದ.