Monday, December 8, 2008

ಏನೋ ಹೇಳಬಹುದಿತ್ತು

ನಾನು ನಿನಗೆ ಏನೋ ಹೇಳಬಹುದಿತ್ತು
ನೀನೂ ನನಗೆ ಏನೋ ಹೇಳಬಹುದಿತ್ತು
ಏನೂ ಹೇಳದೆಯೇ ಕಳೆದು ಹೋಯಿತು
ಆದರೂ ಆ ಬದುಕು ಅದೆಷ್ಟು ಚೆನ್ನಾಗಿತ್ತು.

ಆ ದಾರಿಯ ತುಂಬಾ ಮುಳ್ಳುಗಳಿದ್ದವು
ನೀನು ಜತೆಗಿದ್ದಾಗ ಗೊತ್ತೇ ಇರಲಿಲ್ಲ
ಸವೆಸಿ, ಸವೆಸಿ ಒಂಟಿಯಾದ ಪಯಣಿಗನಿಗೆ
ಏನೋ ಹೇಳಬಹುದಿತ್ತು.

ನೀನು ನಡೆದ ನೆಲ ಮಿದುವಾಗಿದೆ. ಅದು
ನನ್ನೆದೆ ಎಂದು ತಿಳಿದದ್ದು ನೀನು ತೀರ
ತಲುಪಿದ ಮೇಲೆಯೇ, ನಿನಗೆ
ಏನೋ ಹೇಳಬಹುದಿತ್ತು.

ಸಂಜೆಗಳನ್ನೆಲ್ಲಾ ಸುಮ್ಮನೆ ಪುಡಿಗಟ್ಟಿದೆವು
ನೀನು ಮೌನವಾಗಿ, ನಾನು ಕಿವುಡನಾಗಿ
ಕೂತು ಕೂತು ಹಾಗೇ ಎದ್ದು ಹೋಗಿದ್ದೆವು
ಏನೋ ಹೇಳಬಹುದಿತ್ತು.

ಬದುಕಿನಲ್ಲಿ ಕನಸುಗಳನ್ನು ತೇಲಿಬಿಟ್ಟೆವು
ಶೂನ್ಯವೇ ಮಿತಿಯೆಂಬಂತೆ
ಕೊನೆಗೆ ಉಳಿದದ್ದು ಅದು ಮಾತ್ರ- ಬೆಚ್ಚಗಾಗಿ
ಇಬ್ಬರಿಗೂ ಏನೋ ಹೇಳಬಹುದಿತ್ತು
ಆದರೂ ಆ ಬದುಕು ಅದೆಷ್ಟು ಚೆನ್ನಾಗಿತ್ತು.

Sunday, December 7, 2008

ಹಕ್ಕಿ ಮತ್ತು ಪ್ರಶ್ನೆ

ಪರಿಸ್ಥಿತಿ
ಅಷ್ಟೊಂದು ಅಸಹನೀಯವಾಗದೇ
ಇರುತ್ತಿದ್ದರೆ ಆ ಹಕ್ಕಿಗೆ
ರೆಕ್ಕೆಪುಕ್ಕಗಳು ಹುಟ್ಟುತ್ತಿರಲಿಲ್ಲ
ನಭದಿ ಹಾರುತ್ತಿರಲೂ ಇರಲಿಲ್ಲ
ಈಗಲೂ ಅಷ್ಟೆ..
ತೀರಾ ಸಹನೀಯವಾಗೇನೂ ಇಲ್ಲ .
ರೆಕ್ಕೆಯಲ್ಲಿ ರಂಧ್ರಗಳು
ಕಾಣುವುದೆಷ್ಟೋ, ಕಾಣದ್ದೆಷ್ಟೋ
ದರಿದ್ರ, ಬರ, ಬಡತನ, ಕೊನೆಯಿಲ್ಲದ್ದು.
ಭ್ರಷ್ಟ, ಹೊಟ್ಟೆಬಾಕತನ ಮುಗಿಯದ್ದು.
ರೆಕ್ಕೆಯಂತೂ ಛಿದ್ರಛಿದ್ರ
ನೆತ್ತರ ಕಾರುವ ಆಕ್ರಂದನ,
ಮೇಧಾವಿಯ ಕಿವಿಗೆ ದೂರ
ಹಕ್ಕಿ ಅರಚುತ್ತಲೇ ಇದೆ.
ಚಪ್ಪಾಳೆ ಮೊಳಗುತ್ತಲೇ ಇದೆ.
ಹಕ್ಕಿಯ ಅಳಿವು-ಉಳಿವು ?

ಉಳಿದದ್ದು ಅದೊಂದೇ ಪ್ರಶ್ನೆ.

Friday, November 7, 2008

ಆಕೆಗೆ ಡಿಕ್ಕಿ ಹೊಡೆದಿದ್ದೆ !

ತುಂಬಾ ದಿನ ಆಯ್ತು ನಿಮ್ಮ ಜೊತೆ ಮಾತನಾಡಿ. ಕೆಲಸದ ಒತ್ತಡಗಳು, ಹಬ್ಬದ ಗೌಜಿ ಎಲ್ಲಾ ಮುಗಿದು ಒಂದಿಷ್ಟು ನಿರುಮ್ಮಳನಾಗಿದ್ದೇನೆ. ಹಾಗಾಗಿ ಈಗ ಮತ್ತೆ ಅಂಗಳಕ್ಕೆ ಬಂದಿದ್ದೇನೆ. ನಾನು ಈಗ ಹೇಳ ಹೊರಟಿರುವುದು ಮತ್ತದೇ ಬಾಲ್ಯದ ಬಗ್ಗೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ನಾನು ಬಾಲ್ಯವನ್ನು ಅದೆಷ್ಟು ಆಸ್ವಾದಿಸಿದ್ದೇನೋ, ಅಷ್ಟೇ ಬೇಗ ಬಾಲ್ಯವನ್ನು ಕಳೆದುಕೊಂಡಿದ್ದೇನೆ. ಆಗ ಹಾಕಲು ಇದ್ದದ್ದು ಮೂರೇ ಮೂರು ಚೆಡ್ಡಿ, ನಾಲ್ಕು ಅಂಗಿ. ಬ್ರಾಹ್ಮಣರಾದ ನಮಗೆ ಸರಕಾರದಿಂದ ಸಮವಸ್ತ್ರವೂ ಲಭಿಸುತ್ತಿರಲಿಲ್ಲ. ವಷ೯ಕ್ಕೊಂದು ಹೊಸ ಜೊತೆ ಧಿರಿಸು ತೆಗೆದುಕೊಂಡರೆ, ಹಳೆಯ ಒಂದು ಜೊತೆಗೆ ವಿಆರ್‍ ಎಸ್‌ ಕೊಡ್ತಾ ಇದ್ದೆ. ಆದರೆ, ನನ್ನ ಬಾಲ್ಯದ ಅವಾಂತರಗಳಿಗೆ ಏನೂ ಬರವಿರಲಿಲ್ಲ.

ನಂಗೆ ನಿದ್ದೆ ಮಾಡೋದು ಅಂದ್ರೆ ತುಂಬಾ ಆಸಕ್ತಿ. ಇದರಲ್ಲೇನೂ ವಿಶೇಷ ಇಲ್ಲ ಅಂದ್ಕೋಬೇಡಿ. ಯಾಕಂದ್ರೆ ಅದು ನಂಗೆ ಬರೇ ಆಸಕ್ತಿಯ ವಿಚಾರವಷ್ಟೇ ಆಗಿರಲಿಲ್ಲ, ಒಂದು ರೀತಿಯಲ್ಲಿ ನನಗೆ ನಿದ್ದೆ ಮಾಡೋದು ಚಾಳಿ ! ಪ್ರೈಮರಿಯಲ್ಲಿದ್ದಾಗ ನಿದ್ದೆಯಿಂದಾದ ಅವಾಂತರಗಳ ಬಗ್ಗೆ ಅಷ್ಟೊಂದು ನೆನಪಿಲ್ಲ. ಆದ್ರೆ, ಅದಕ್ಕೊಂದು ವಿಶ್ವವ್ಯಾಪಿ ಮಾನ್ಯತೆ ಸಿಕ್ಕಿದ್ದು ಡಿಗ್ರಿ ಕಾಲೇಜಿಗೆ ಸೇರಿದ ಮೇಲೆಯೇ ! ನನ್ನಿಂದ ಪ್ರಭಾವಿತರಾದವರು, ನನ್ನ ಆಟೋಗ್ರಾಫ್ ತುಂಬಾ ನನ್ನ ನಿದ್ದೆಯ ವಿವಿಧ ಭಂಗಿಗಳ ಚಿತ್ರಗಳನ್ನು ಬಿಡಿಸಿಟ್ಟಿದ್ದಾರೆ. ಅದಕ್ಕೆ ವಿವಿಧ ಹೆಸರುಗಳನ್ನೂ ಇಟ್ಟಿದ್ದಾರೆ. ಅಧ೯ಕಟಿ ನಿದ್ರಾಸನ, ಪದ್ಮ ನಿದ್ರಾಸನ, ಬೆಂಚಾಸನ, ಹೀಗೆ ಯೋಗಾಸನದ ವಿವಿಧ ಭಂಗಿಗಳನ್ನು ನಾನು ನಿದ್ದೆ ಹೊಡೆಯುವ ವಿವಿಧ ಭಂಗಿಗಳ ಜೊತೆ ಸಮೀಕರಿಸಿದ್ದಾರೆ.
ಒಂದಿನ ರಾತ್ರಿ ೭ ಗಂಟೆಗೆ ಹಾಸ್ಟೆಲ್‌ನಲ್ಲಿ ಚೇರ್‌ ಮೇಲೆ ಕುಳಿತುಕೊಂಡು ನಿದ್ದೆ ಮಾಡುತ್ತಿದೆ. ನಮ್ಮ ಹಾಸ್ಟೆಲ್ ಮೇಟ್ ಗಳು ನನ್ನ ಟೇಬಲ್ ಮೇಲೆ ಕಸದ ಬುಟ್ಗಿ, ಊಟದ ತಟ್ಟೆ , ಹಾಸಿಗೆ ಎಲ್ಲಾ ಎತ್ತಿಟ್ಟಿದ್ದರು. ವಾಡ೯ನ್‌ ಬರುವವರೆಗೆ ನಂಗೆ ಎಚ್ಚರವೇ ಇರಲಿಲ್ಲ. ಆಮೇಲೆ ಕಂಟಿನ್ಯೂಸ್ ಆಗಿ ೧೫ ದಿನ ಡೈರಿಯಿಂದ ಸೆಗಣಿ ಎತ್ತಿದ್ದೆ, ಪನಿಷ್‌ಮೆಂಟ್ !

ಅದಾಗಿ ಒಂದು ವಾರ ಕಳೆದಿರಲಿಲ್ಲ. ಸ್ಟಡಿ ಹವರ್‌ನಲ್ಲೇ ಮಲಗಿದ್ದೆ. ಮತ್ತದೇ ಗೆಳೆಯರು ನನ್ನ ಮೇಲೆ ಬಿಳಿ ಪಂಚೆ ಹೊದೆಸಿದರು. ಮತ್ಯಾರೋ ಊದುಬತ್ತಿ ಉರಿಸಿದರು. ಸಣ್ಣ ಶಲ್ಯವನ್ನು ಮಡಚಿ ನನ್ನ ಕತ್ತಿಗೆ ಹಾಕಿದರು. ಪಕ್ಕದಲ್ಲಿ ಕುಳಿತು ಅತ್ತರು. ಸಾಲದ್ದಕ್ಕೆ ಫೋಟೋ ಹೊಡೆದರು. ಇದನ್ನೆಲ್ಲಾ ಕಿಟಕಿ ಮೂಲಕ ವಾಡ೯ನ್ ನೋಡುತ್ತಿದ್ದದ್ದನ್ನು ಯಾರೂ ಗಮನಿಸಿರಲಿಲ್ಲ. ವಾಡ೯ನ್ನೂ ಕೇಳಲಿಲ್ಲ. ಆದರೆ, ಬೆಳಿಗ್ಗೆ ಬಂದವರೇ, ಗೆಸ್ಟ್ ಬಂದಿದ್ದಾರೆ ಎಂದು ಹೇಳಿ ಕ್ಯಾಮೆರಾ ತೆಗೆದುಕೊಂಡು ಹೋದರು. ಪ್ರಿನ್ಸಿಪಾಲ್ ಫೋನ್ ಮಾಡಿ ಕರೆಸಿಕೊಂಡಾಗಲೇ ನಮಗೆ ಜ್ಞಾನೋದಯವಾದದ್ದು.

ಅದು ಡಿಗ್ರಿಯ ಕೊನೆಯ ವಷ೯. ಪರೀಕ್ಷೆಗಳೆಲ್ಲಾ ಮುಗಿದಿತ್ತು. ಕಾಲೇಜಿನ ವಾಷಿ೯ಕ ಸಂಚಿಕೆ ಪೂತಿ೯ ಗೊಳಿಸಲು ನಾವಿನ್ನೂ ಹಾಸ್ಟೆಲ್‌ನಲ್ಲೇ ಇದ್ದೆವು. ಮತ್ತದೇ, ನಿದ್ದೆಯ ಮಂಪರಿನಲ್ಲಿ, ಕಾಲೇಜಿನತ್ತ ಹೆಜ್ಜೆ ಹಾಕುತ್ತಿದ್ದೆ. ಹಾಗೆ ನಡೆಯುತ್ತಿದ್ದಾಗಲೇ ಭಿಕ್ಷುಕಿಯೊಬ್ಬಳಿಗೆ ಡಿಕ್ಕಿ ಹೊಡೆದುಬಿಟ್ಟೆ. ತಗೊಳ್ಲಿ, ಜೀವನ ಪೂತಿ೯ ಖಚಿ೯ಗಾಗುವಷ್ಟು ಬೈಗುಳಗಳನ್ನು ಆಕೆ ದಾನವಾಗಿ ನೀಡಿದ್ದಳು. ಸತತ ೧೩ ದಿನವೂ ಬೆಳಿಗ್ಗೆ ಕಾಲೇಜಿಗೆ ಹೋಗುವಾಗ ಆಕೆಯಿಂದ ಉಗಿಸಿಕೊಳ್ಳುವ ಭಾಗ್ಯ ನನ್ನದಾಗಿತ್ತು ! ಅದೇ ಕೊನೆ, ಆಮೇಲೆ ಯಾವತ್ತೂ ಅತಿರೇಕವಾಗಿ ನಿದ್ದೆ ಮಾಡಿಲ್ಲ. ಪತ್ರಿಕೋದ್ಯಮ ಕ್ಷೇತ್ರದಲ್ಲಿರೋದ್ರಿಂದ ಅದಕ್ಕೆ ಅವಕಾಶವೂ ಕಡಿಮೆಯೇ. ನನ್ನ ನಿದ್ರಾಸನಗಳ ಬಗ್ಗೆ ದೊಡ್ಡ ಪುಸ್ತಕ (?) ಬರೆದು, ಲೋಕಾಪ೯ಣೆ ಮಾಡಬೇಕೆಂದಿದ್ದೇನೆ. ನನ್ನ ಹಾಗೆ ನಿಮಗೂ ನಿದ್ದೆಯಿಂದ ಪ್ರಯೋಜನಗಳಾಗಿದ್ದರೆ, ಬರೆದು ತಿಳಿಸಿ.

Wednesday, October 1, 2008

ಅಲ್ಲಿ ಇನ್ನೂ ದೆವ್ವ ಇದೆ !


ಅಲ್ಲಿ ಇನ್ನೂ ದೆವ್ವ ಇದೆ ! ನೀವು ನಂಬ್ತೀರೋ ಇಲ್ವೋ ಗೊತ್ತಿಲ್ಲ. ಆದ್ರೆ ನಾವು ಚಿಕ್ಕವರಿದ್ದಾಗ ಅದನ್ನು ಸಂಪೂರ್ಣ ನಂಬಿದ್ದೆವು... ಹೆದರಿಕೊಂಡಿದ್ದೆವು. ಅಂತಹದ್ದೊಂದು ಜಾಗ ಇದ್ದದ್ದು ನಮ್ಮ ಶಾಲೆಯ ಹಿಂಬದಿ ಗುಡ್ಡದಲ್ಲಿ. ನಾನು ಓದಿದ್ದು ಸುಳ್ಯ ತಾಲೂಕಿನ ಜಯನಗರ ಶಾಲೆಯಲ್ಲಿ. ಮದ್ಯಾಹ್ನ ಊಟ ಆದ ಬಳಿಕ, ಆಟದ ವೇಳೆಯಲ್ಲಿ ನಾವು ಕಳ್ಳ ಪೋಲಿಸ್ ಆಟ ಆಡುತ್ತಿದ್ದೆವು. ನಮಗೆ ಅಡಗಿಕೊಳ್ಳಲು ಜಾಗ ಸಿಗುತ್ತಿದ್ದದ್ದೇ ಶಾಲೆಯ ಹಿಂಬದಿ ಗುಡ್ಡದಲ್ಲಿ. ಅಲ್ಲಿ ಗೇರು ಬೀಜದ ತೋಪು ಇತ್ತು. ಗೇರು ಬೀಜದ ಮರದ ಕೊಂಬೆಗಳ ಮೇಲೆ ಅಡಗಿಕೊಳ್ಳುತ್ತಿದ್ದೆವು .


ಆ ತೋಪಿನ ತುತ್ತ ತುದಿಯಲ್ಲಿ ಒಂದು ಗುಡಿಸಲು ಇತ್ತು. ಅರ್ಧ ಗೋಡೆ ಮಣ್ಣಿನಲ್ಲಿ ಕತ್ತಲಾಗಿತ್ತು.. ಉಳಿದರ್ಧ ಗೋಡೆಗೆ ತೆಂಗಿನ ಗರಿಗಳಿಂದ ಮಾಡಿದ್ದ ತಟ್ಟಿಗಳನ್ನು ಪೇರಿಸಲಾಗಿತ್ತು. ತೋಪಿನ ಅರೆಕತ್ತಲೆಯಲ್ಲಿ ಆ ಗುಡಿಸಲು ಒಂದು ವಿಚಿತ್ರ ಭಯವನ್ನು ಮೊದಲ ನೋಟಕ್ಕೆ ಹುಟ್ಟಿಸುತ್ತಿತ್ತು. ನಮ್ಮ ಗೆಳೆಯರು ಕೂಡ ಆ ಮನೆಯ ಬಗ್ಗೆ ಬಗೆಬಗೆಯ ಕತೆಗಳನ್ನು ಆಗಾಗ ಹೇಳುತ್ತಿದ್ದರು. ಹಾಗಾಗಿ ನಾವ್ಯಾರೂ ಅತ್ತ ಸುಳಿಯುತ್ತಿರಲಿಲ್ಲ. ಆ ಭಯs ಶಾಲೆ ಬಿಟ್ಟ ಮೇಲೂ ಹಾಗೆಯೇ ಉಳಿದಿತ್ತು.


ಇತ್ತೀಚಿಗೆ ನಮ್ಮ ಶಾಲೆಯ ಬೆಳ್ಳಿ ಹಬ್ಬದ ಸಂಭ್ರಮ ಆಚರಣೆ ಇತ್ತು. ನಾವೆಲ್ಲಾ ಓದುತ್ತಿದ್ದಾಗ ರಾಷ್ಟ್ರೀಯ ಹಬ್ಬಗಳಿಗೆ ಅಣಿಯಾಗುತ್ತಿದ್ದ ಸಿದ್ಧವಾಗುತ್ತಿದ್ದ ಸಂಭ್ರಮ ನಮಗೆ ನೆನಪಾಯ್ತು. ಆ ಖುಷಿಯೊಂದಿಗೆ ಶಾಲೆಯ ಆವರಣವನ್ನೆಲ್ಲಾ ಬಣ್ಣದ ಕಾಗದಗಳಿಂದ ಸಿಂಗರಿಸಿದ್ದೆವು. ಕಾರ್ಯಕ್ರಮ ಆರಂಭಗೊಳ್ಳಲು ಸಮಯವಿತ್ತು. ಹಾಗಾಗಿ ನಾವು ಕಳ್ಳ ಪೊಲೀಸ್ ಆಟ ಆಡಲು ಆರಂಭಿಸಿದೆವು. ಅಟಗಿಕೊಳ್ಳಲು ಮತ್ತದೇ ಗೇರುಬೀಜದ ತೋಪಿನತ್ತ ಹೋದೆವು. ಆಗ ನಮ್ಮನ್ನು ಮತ್ತೆ ಕಾಡಿದ್ದು ದೆವ್ವ !

ಆಟ ಬಿಟ್ಟು ಈಗ ಪಾಳು ಬಿದ್ದಿರುವ ಆ ಗುಡಿಸಲಿನತ್ತ ನಾವು ಹೋದೆವು. ಶಾಲೆಯಲ್ಲಿ ಓದುತ್ತಿದ್ದಾಗ ಸಾಧ್ಯವಾಗದ ರಹಸ್ಯ ಭೇಧಿಸಲು ಈಗ ಸಮಯ ಕೂಡಿ ಬಂದಿತ್ತು. ಅಂತೂ ಇಂತು ಆ ಗುಡಿಸಲಿನ ಹತ್ತಿರ ಬಂದೆವು. ಹೆಜ್ಜೆಗಳು ಮಾತ್ರ ಹಿಂದೆ ಹಿಂದೆ ಸರಿಯುತ್ತಿದ್ದವು. ಈಗ ಆ ಗುಡಿಸಲು ಕುಸಿದು ಬಿದ್ದಿದೆ. ಅರೆ ಬರೆ ಮಣ್ಣಿನ ಗೋಡೆ ಮಾತ್ರ ಉಳಿದಿದೆ. ಇನ್ನೇನು ಒಳಗೆ ಪ್ರವೇಶಿಸಬೇಕು ಅನ್ನುವಷ್ಟರಲ್ಲಿ ಗೆಳೆಯ ಪ್ರವೀಣ ಅಂದ... ಏರೋ ಪಾತೆರ್‍ಲೆಕ್ಕ ಆಂಡ್ ! ( ಯಾರೋ ಮಾತನಾಡಿದ ಹಾಗಾಯ್ತು !) ನಾವು ಎದ್ದೆವೋ ಬಿದ್ದೆವೋ ಅಂತ ಓಡಿದೆವು. ಸುಸ್ತು ಆಗಿ ಶಾಲೆಯ ಪಡಸಾಲೆಯಲ್ಲಿ ಬಿದ್ದುಕೊಂಡೆವು. ಕೊನೆಗೂ ರಹಸ್ಯ ಭೇದಿಸಲು ಸಾಧ್ಯವೇ ಆಗಲಿಲ್ಲ. ಕಾಯ೯ಕ್ರಮ ಎಲ್ಲಾ ಮುಗಿಯಿತು. ಶಾಲೆಯ ಅಭಿವೃದ್ದಿಗೆ ನಮ್ಮಿಂದಾಗುವಷ್ಟು ಸಹಾಯ ಮಾಡಿ ಮತ್ತೆ ನಮ್ಮ ನಮ್ಮ ಊರಿನತ್ತ ಹೊರಟು ನಿಂತಿದ್ದೆವು.

ಊರಿಗೆ ಮರಳುವ ಮುನ್ನ ಮತ್ತೊಮ್ಮೆ ದೆವ್ವವನ್ನು ನೋಡುವ ಇಚ್ಛೆಯಾಯಿತು. ಅದ್ಹೇಗೋ ನಮ್ಮ ಅವಾಂತರಗಳನ್ನೆಲ್ಲಾ ತಿಳಿದುಕೊಂಡ, ನಮ್ಮ ತಮಿಳು ಮಾಷ್ಟ್ರು ನಡೆದ ಕತೆಯನ್ನೆಲ್ಲಾ ನಮಗೆ ಹೇಳಿದರು. ಆ ಮನೆಯಲ್ಲಿದ್ದ ಅಜ್ಜಿ ವಿಧಿವಶರಾಗಿ ವರುಷಗಳೇ ಕಳೆದಿವೆಯಂತೆ. ದಿಕ್ಕಿಲ್ಲದ ಹೆಂಗಸು ಅವರಿವರ ತೋಟದಲ್ಲಿ ಕೆಲಸ ಮಾಡಿಕೊಂಡು ಬದುಕು ಸವೆಸುತ್ತಿದ್ದಳು, ಹಾಗಾಗಿ ನಮಗೆ ಅವಳನ್ನು ನೋಡುವ ಭಾಗ್ಯವೇ ಸಿಕ್ಕಿರಲಿಲ್ಲ. ವಿಷಯ ಗೊತ್ತಿಲ್ಲದ ನಮ್ಮಂತಹ ಅದೆಷ್ಟೋ ಮಕ್ಕಳು ಆ ತೋಪಿನಿಂದ ಗೇರು ಬೀಜಗಳನ್ನು ಕದಿಯುತ್ತಿರಲಿಲ್ಲ ಅನ್ನುವುದೇ ನೆಮ್ಮದಿಯ ಸಂಗತಿ. ಯಾಕೆಂದರೆ ಅಲ್ಲಿ ದೆವ್ವವಿತ್ತಲ್ಲ ! ನಮ್ಮಂತೆ ಅದೆಷ್ಟೋ ಮಕ್ಕಳ ಮನಸ್ಸಿನಲ್ಲಿ ಭಯದ ಮೂಲಕವೇ ಸ್ಥಾನ ಗಿಟ್ಟಿಸಿದ್ದ ಅಜ್ಜಿಯ ನೆನಪಿಗೆ ನಮ್ಮ ಶಾಲೆಗೆ ದೊಡ್ಡದೊಂದು ಗಡಿಯಾರ ನೇತು ಹಾಕಿ ಬಂದಿದ್ದೇವೆ. ಅಜ್ಜಿ ಬದುಕಿರುವಾಗ ನಾವು ಏನು ಮಾಡಲೂ ಸಾಧ್ಯವಾಗಿರಲಿಲ್ಲ.

ಮೊನ್ನೆ ವಿಜಯಕನಾ೯ಟಕದಲ್ಲಿ ಕತೆಯೊಂದು ಬಂದಿತ್ತು. ಅದನ್ನು ಓದಿ... ನಾನು ನನ್ನ ಬಾಲ್ಯಕ್ಕೆ ಮರಳಿದ್ದೆ.

Friday, September 19, 2008

ಮಕ್ಕಳಿಂದ ದೊಡ್ಡವರಿಗೆ ಬುದ್ಧಿ !

ಹುಬ್ಬಳ್ಳಿಯಿಂದ ನಮ್ಮ ವರದಿಗಾರ ಶರತ್ ಅವ್ರು ಇವತ್ತು ಒಂದು ವರದಿ ಕಳುಹಿಸಿದರು. ಹುಬ್ಬಳ್ಳಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಶ್ರೀರಾಮ, ಏಸುಕ್ರಿಸ್ತ, ಅಲ್ಲಾನ ಫೋಟೋಗಳನ್ನು ಇರಿಸಿ ಆಯಾಯ ಧರ್ಮಗಳ ಆಚರಣೆಗಳ ಪ್ರಕಾರ ಪೂಜೆ ಪ್ರಾರ್ಥನೆ ಸಲ್ಲಿಸಿದ್ದಾರೆ. ನಿಜಕ್ಕೂ ವರದಿ ನೋಡಿ ತುಂಬ ಖುಷಿ ಆಯ್ತು. ಇದೇನು ಹೊಸ ವಿಷಯವಲ್ಲ, ಆದರೆ, ಈ ಸಂಧರ್ಭದಲ್ಲಿ ಆ ಮಕ್ಕಳ ಕಾರ್ಯ ತುಂಬ ಶ್ಲಾಘನೆಗೆ ಅರ್ಹವಾದದ್ದು.

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಅಶಾಂತಿ ಮನೆ ಮಾಡಿದೆ. ಕೋಮು-ಕೋಮುಗಳ ನಡುವೆ ಸಂಘರ್ಷ ನಡೆಯುತ್ತಿದೆ. ಒಂದು ರೀತಿಯಲ್ಲಿ ಯಾರೂ ಕೂಡಾ ವಿವೇಚನೆಯಿಂದ ವರ್ತಿಸುತ್ತಿರುವ ಹಾಗೆ ಕಂಡು ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ, ದೊಡ್ಡವರು, ದೊಡ್ದವರೆನ್ನಿಸಿಕೊಂದವರು, ದೊಡ್ಡವರೆಂದು ಕರೆದುಕೊಳ್ಳುತ್ತಿರುವವರಿಗೆ ಬುದ್ಧಿ ಹೇಳುವ ಕಾರ್ಯವನ್ನು ಈ ಮಕ್ಕಳು ಮಾಡಿದ್ದರೆ. ರಾಷ್ಟ್ರಕವಿ ಕುವೆಂಪು ಅವರ ಮನುಜ ಮತ ವಿಶ್ವ ಪಥ ಕಲ್ಪನೆಯನ್ನು ಸಾಕಾರಮಾಡಿದ್ದಾರೆ. ಜಾತಿ-ಜಾತಿಗಳ ನಡುವೆ, ಮತಗಳ ನಡುವೆ ವಿಷ ಬೀಜ ಬಿತ್ತುವವರು ಈ ಮಕ್ಕಳನ್ನು ನೋಡಿ ಕಲಿಯುವಂತಹದ್ದು ತುಂಬಾ ಇದೆ ಅನ್ನಿಸ್ತಿದೆ. ಆಲ್ವಾ ?

Wednesday, September 17, 2008

ಅವಳು ಮತ್ತು ಪ್ರೀತಿ

ಆಕೆ ಅವನ ಬಳಿ ತುಟಿ ಬಿಚ್ಚಿ ಮಾತನಾಡದಿದ್ದರೂ, ಕಣ್ಣಿನ ಮಾತುಗಳು ಸಾವಿರ ಪದಗಳನ್ನು ಮೀರಿಸಿದ್ದವು. ಪ್ರೀತಿಯ ದ್ಯೋತಕವಾಗಿ ಮಳ್ಳಿಗೆಯ ಬಳ್ಳಿಯನ್ನು ಆಕೆಗೆ ನೀಡಿ ಬೇಗ ಬರುವೆನೆಂದು ತಿಳಿಸಿ ಊರಿಗೆ ಮರಳಿದ. ಆಕೆ ಅದನ್ನು ಜೋಪಾನವಾಗಿ ಬೆಳೆಸಿದಳು. ಬಳ್ಳಿ ಮಾವಿನ ಮರದ ಆಸರೆಯಲ್ಲಿ ವಿಸ್ತಾರವಾಗಿ ಬೆಳೆಯಿತು.

ಮೊಗ್ಗಾಯಿತು....ಹೂವಾಯಿತು.....ಬಾಡಿತು. ಆತನ ಸುಳಿವಿಲ್ಲ. ಅವನ ನೆನಪು ಮಾಸದಾದಾಗ ಅಕ್ಕನ ಕಂದನಿಗೆ ಆಸರೆಯಾದಳು. ಆ ಕಂದನ ಕಣ್ಣಲ್ಲಿ ಅವನ ಬಿಂಬ ಕಾಣುತ್ತಿದ್ದಳು. ಕಾಯುತ್ತಿದ್ದಳು. ಕೊನೆಗೂ ಆತ ಬಂದನೇ ಬಂದ. ಮಲ್ಲಿಗೆಯ ಬಳ್ಳಿ ಬಾಡಿತ್ತು. ಅದರ ಹಿಂದೆ ನಿಂತು ದಿಟ್ಟಿಸಿದ. ಇವಳ ಮಡಿಲಲ್ಲಿ ಕಿಲಕಿಲ ನಗುತ್ತಿತ್ತು ಮುದ್ದುಕಂದ. ಆತನ ಪ್ರೀತಿಯ ಕುಸುಮ ಅರಳುವ ಮೊದಲೇ ಬಾಡಿತ್ತು..ಬಂದ ದಾರಿಯಲ್ಲೇ ಹಿಂತಿರುಗಿದ. ಮಲ್ಲಿಗೆ ಬಳ್ಳಿಯ ಆಸರೆ ಕೊಂಡಿ ಕಳಚಿ ಬಿತ್ತು. ಪುನ ಆಕೆ ಅವನಿಗಾಗಿ ಅಲ್ಲೇ ಕಾದಳು.

Sunday, September 14, 2008

ಸುವರ್ಣಕ್ಕೆ ಕಿಡಿಗೇಡಿಗಳ ಲಗ್ಗೆ


ಎಂದಿನಂತೆ ಆಫೀಸ್ಗೆ ಬರ್ತಾ ಇದ್ದೆ. ಆಫೀಸ್ ಮುಂದೆ ಪೋಲಿಸ್ ನಿಂತಿದ್ರು, ಗೇಟ್ ಹಾಕಲಾಗಿತ್ತು. ಒಳಗೆ ಬಂದು ನೋಡಿದ್ರೆ, ಗಲಾಟೆ ನಡೀತಾ ಇದೆ.... ಹೌದು, ಪತ್ರಿಕಾ ಸ್ವಾತಂತ್ರ್ಯದ ಮೇಲೆ ಅಲ್ಲಿ ದಾಳಿ ನಡೆಯುತ್ತಿತ್ತು. ಸುವರ್ಣ ಚಾನೆಲ್ ನವರು ಕ್ಷಮೆ ಕೇಳಬೇಕು ಅಂತ ಬಂದಿದ್ದವರು ಒತ್ತಾಯಿಸ್ತಾ ಇದ್ರು.

ಆದದ್ದು ಇಷ್ಟೇ, ಕಳೆದ ವಾರ ನಮ್ಮ ಚಾನೆಲ್ ನಲ್ಲಿ ಪ್ರಮೋದ್ ಮುತಾಲಿಕ್ ಅವರ ಸಂದರ್ಶನವೊಂದು ಪ್ರಸಾರವಾಗಿತ್ತು. ಆ ಕಾರ್ಯಕ್ರಮಕ್ಕೆ ಸಂಭಂದಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅನ್ನುವ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಆಕ್ಷೇಪ ಎತ್ತಿದ್ದರು. ಪ್ರಮೋದ್ ಮುತಾಲಿಕ್ ಹೇಳಿದ್ದು ಅವರ ವೈಯುಕ್ತಿಕ ಅಭಿಪ್ರಾಯ, ಅದಕ್ಕೂ ನಮ್ಮ ಚಾನೆಲ್ ನ ನಿಲುವಿಗೂ ಯಾವುದೇ ಸಂಬಂಧವಿಲ್ಲ ಅಂತ ನಾವು ಎಷ್ಟೇ ಹೇಳಿದರು ಅದನ್ನು ಕೇಳುವ ತಾಳ್ಮೆ ಅವರಲ್ಲಿರಲಿಲ್ಲ. ಅವರು ಮಾತನಾಡುತ್ತಿದ್ದ ರೀತಿ ನೋಡಿದರೆ, ಅನುಚಿತವಾಗಿ ವರ್ತಿಸಲೆಂದೇ ಬಂದವರಂತಿತ್ತು. ಮುತಾಲಿಕ್ ವಾದಗಳನ್ನು ತಳ್ಳಿ ಹಾಕುತ್ತೀರಾ ? ನಿಮ್ಮ ಸ್ಟ್ಯಾಂಡ್ ಬಗ್ಗೆ ಹೇಳ್ತೀರಾ ? ಹಾಗಾದ್ರೆ, ಅದಕ್ಕೂ ನಾವು ಅವಕಾಶ ಮಾಡಿ ಕೊಡುತ್ತೇವೆ. ಅರ್ಧ ಗಂಟೆಗಳ ಕಾಲ ನಿಮಗೆ ಅವಕಾಶ ಕೊಡುತ್ತೇವೆ, ಮಾತನಾಡಿ ಅಂದ್ರೆ ಅದನ್ನೂ ಅವರು ಕೇಳಲಿಲ್ಲ. ಅನುಚಿತವಾಗಿ ವರ್ತಿಸಿದರು, ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರ ವಿಡಿಯೋ ಚಿತ್ರಣ ತೆಗೆದರು, ಸೆಲ್ ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು. ಪೊಲೀಸರು ಮಧ್ಯ ಪ್ರವೇಶಿಸಿ ಹೆಚ್ಚಿನ ಅನಾಹುತವನ್ನು ತಡೆದರು. ಈಗ ಆಫೀಸಿನ ಮುಂದೆ poleesaru ಇದ್ದಾರೆ. vaahiniya mUlaka ತಮ್ಮ ವಾದ ಮಂಡಿಸಲು ಅವಕಾಶ ನೀಡಿದ ಬಳಿಕವು ನಡೆಸಿದ ಇವರ ದುರ್ನಡತೆಯನ್ನು ಏನೆನ್ನಬೇಕು. ಇಂತಹವರಿಗೆಲ್ಲ ಬುದ್ಧಿ ಬರೋದು ಯಾವಾಗ ?

Wednesday, August 27, 2008

ಡಿವಿಜಿ ರಸ್ತೆ ದೇವೇಗೌಡ್ರದ್ದಾ ?

ಡಿವಿಜಿ ರಸ್ತೆ ದೇವೇಗೌಡ್ರದ್ದಾ ? ಇದ್ದಕ್ಕಿದ್ದ ಹಾಗೆ ಈ ಪ್ರಶ್ನೆ ಈಗ ಯಾಕೆ ಬಂತು ಅಂತ ತಲೆ ಕೆಡಿಸಿಕೊಳ್ಳಬೇಡಿ. ಇಂದು ಬೆಳಿಗ್ಗೆ ಬೆಂಗಳೂರಿನ ಗಾಂಧಿ ಬಜಾರ್‌ ಬಳಿ ಇರುವ ಡಿವಿಜಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದೆ. ನನ್ನ ಮುಂದೆ ಇಬ್ಬರು ಹುಡುಗಿಯರು ನಡೆದುಕೊಂಡು ಹೋಗುತ್ತಿದ್ದರು. ವಯಸ್ಸು ಹೆಚ್ಚೆಂದರೆ ೨೦ರ ಆಸುಪಾಸು. ಇಲ್ಲಿ ಪ್ರಶ್ನೆ ವಯಸ್ಸಿನದ್ದಲ್ಲ. ಅವರ ಜ್ಞಾನದ್ದು.
ಆ ಹುಡುಗಿಯರು ಅಲ್ಲೇ ಎಲ್ಲೋ ಕಾಲೇಜಿಗೆ ಹೊರಟಿದ್ದಿರಬೇಕು. ಡಿವಿಜಿ ರಸ್ತೆಯೂ ಅವರಿಗೆ ತುಂಬಾ ಪರಿಚಯವಿದ್ದಂತಿತ್ತು. ಇಂಗ್ಲೀಷಿನಲ್ಲಿ ಅದೇನೋ ಮಾತನಾಡುತ್ತಿದ್ದರು. ನಾನು ಅದರ ಬಗ್ಗೆ ಗಮನ ಹರಿಸಿರಲಿಲ್ಲ. ಅವರನ್ನು ದಾಟಿ ನಾನು ಮುಂದೆ ಹೋಗುತ್ತಿದ್ದೆ. ಅಷ್ಟರಲ್ಲಾಗಲೇ, ಅವರಲ್ಲೊಬ್ಬಾಕೆ, ವಾಟ್‌ ಈಸ್‌ ದ ಫುಲ್‌ ಫಾಮ್‌೯ (ವಿಸ್ತೃತ ರೂಪ) ಆಫ್‌ ಡಿವಿಜಿ ರೋಡ್‌ ಯಾರ್‌ ಅಂತ ಕೇಳಿದ್ಳು. ಅದಕ್ಕೆ ಮತ್ತೊಬ್ಬಳು ದೇವೇಗೌಡ ರೋಡ್‌ ಯಾರ್‌ ಅಂದ್ಳು. ನಾನು ಬೆಚ್ಚಿಬಿದ್ದೆ ! ಅದ್ಯಾಕೋ, ನಾಡಿನ ಸಂಸ್ಕೃತಿ ಹಿರಿಮೆಯನ್ನು ಎತ್ತಿ ಹಿಡಿದ ಡಿವಿಜಿಯವರಿಗಿಂತಲೂ ದೇವೇಗೌಡ್ರು ಫೇಮಸ್‌ ಆಗಿಬಿಟ್ರಲ್ಲಾ ? (ದೇವೇಗೌಡ್ರು ಕ್ಷಮಿಸಬೇಕು ) ನಮ್ಮ ದೇಶದಲ್ಲಿ ರಾಜಕೀಯದ ಮುಂದೆ ಬೇರೇನೂ ಇಲ್ಲವೇನೋ ? ನಿಮಗೇನನ್ನಿಸತ್ತೆ ?

Sunday, August 24, 2008

ಗ್ರೀನ್ ಪೆನ್ನಿನ ಮಹಿಮೆ

ಮೊನ್ನೆ ಹೀಗೆ ಆಫೀಸ್ನಲ್ಲಿ ಕುಳಿತು ಮಾತನಾಡುತ್ತಿದ್ದೆವು. ಮಾತಿನ ನಡುವೆ ಯಾರೋ ಪೆನ್ ಕೇಳಿದರು. ಮಾತು ಹೊರಳಿ ಪೆನ್ನುಗಳತ್ತಲೇ ತಿರುಗಾದತೊಡಗಿತು. ಆಗ ನನಗೆ ನೆನಪಾದದ್ದು... ನನ್ನ ಗ್ರೀನ್ ಪೆನ್ನು ! ಅದರ ಹಿಂದೆ ದೊಡ್ಡದೊಂದು ಕತೆ ಇದೆ. ನಂಗೆ ಬರೆಯೋದು ಹುಚ್ಚು, ಸಿಕ್ಕವನಿದ್ದಗಲೇ, ಕೈಗೆ ಸಿಕ್ಕಿದ್ದೆಲ್ಲವನ್ನೂ ಗೀಚುತ್ತಿದ್ದೆ. ಹಾಗಾಗಿ ಪೆನ್ನುಗಳೂ ನನ್ನಲ್ಲಿ ತುಂಬಾ ಇದ್ದವು. ಆಗ ಕಡಿಮೆ ಬೆಲೆಗೆ ಸಿಗುತ್ತಿದ್ದ ಪೆನ್ನುಗಳಲ್ಲಿ ತುಂಬಾ ವೆರೈಟಿ ಇರಲಿಲ್ಲ. ತುಂಬಾ ದುಡ್ಡು ಕೊಟ್ಟು ಪೆನ್ನು ಖರೀದಿಸುವ ಶಕ್ತಿ ನನ್ನಲ್ಲಿರಲಿಲ್ಲ.

ಆಗ ಬರುತ್ತಿದ್ದ ಪೆನ್ನುಗಲ್ಲಲ್ಲಿ (ನನ್ನ ಊರಲ್ಲಿ ಸಿಗುತ್ತಿದ್ದ) ಭಾರೀ ಫೇಮಸ್ ಆದದ್ದು ನಾಲ್ಕು ಕದ್ದಿಗಲಿದ್ದ ಪೆನ್ನು. ಅದರಲ್ಲಿ ನೀಲಿ, ಕೆಂಪು, ಕಪ್ಪು ಮತ್ತು ಹಸಿರು ಬಣ್ಣದ ಕದ್ದಿಗಲಿರುತ್ತಿದ್ದವು. ಕಪ್ಪು ಮತ್ತು ನೀಲಿ ಬಣ್ಣದವುಗಳನ್ನು ನಾನು ಬರೆಯಲು ಉಪಯೋಗಿಸುತ್ತಿದ್ದೆ. ನಮ್ಮ ಟೀಚರ್ ಕೆಂಪು ಬಂನದ್ದನ್ನು ಉಪಯೋಗಿಸುತ್ತಿದ್ದರು. ಹಾಜರಿ ಕರೆಯುವಾಗ ಅವರಿಗೆ ಪೆನ್ನು ಕೊಡಲು ನಾವು ಪೈಪೋಟಿ ನಡೆಸುತ್ತಿದ್ದೆವು.

ಆಗೆಲ್ಲಾ, ನಂಗೆ ಎಲ್ಲರಿಗಿಂತ ಡಿಫರೆಂಟ್ ಆಗಿ ಇರಬೇಕು ಅನ್ನುವ ಹುಚ್ಚು ಜಾಸ್ತಿ ಇತ್ತು. ಎಷ್ಟಾದರೂ ಓದಿನಲ್ಲಿ, ಇತರ ಪಠ್ಯೇತರ ಚಟುವಟಿಕೆಗಳಲ್ಲಿ ನಾನು ಎಲ್ಲರಿಗಿಂತ ಮುಂದೆ ಇದ್ದೆ. ಜೊತೆಗೆ ಊರಲ್ಲಿ ಫೇಮಸ್ ಆಗಿರುವ ನಮ್ಮ ಅಜ್ಜನ ನಾಮ ಬಲವೂ ನನ್ನ ಹಿಂದೆ ಇತ್ತು. ಹಾಗಾಗಿ ನಂಗೆ ಒಂಥರಾ ಇಮೇಜ್ ಇತ್ತು (ಅಹಂ ಅಂದರೂ ತಪ್ಪಲ್ಲ ) ಆ ಹುಚ್ಚಿನಿಂದಾಗಿಯೇ ನಾನು ಗ್ರೀನ್ ಪೆನ್ನಿನಲ್ಲಿ ಬರೆಯುವ ಸಾಹಸಕ್ಕೆ ಕೈ ಹಾಕಿದ್ದು. ನಮಗೆ ಗಣಿತ ಹೇಳಿಕೊಡಲು ಅಶೀರ್ವಾದಂ ಅನ್ನುವ ಮಾಸ್ಟರ್ ಒಬ್ಬರಿದ್ದರು. ಅವರನ್ನು ಕಂಡರೆ ಭಯಂಕರ ಭಯ. ಅವರನ್ನು ತಮಿಳು ಮಾಸ್ಟರ್ ಅಂತ ಕರೆಯುತ್ತಿದ್ದೆವು.

ಗಣಿತ ನೋಟ್ಸ್ ಅನ್ನೇ ನಾನು ಗ್ರೀನ್ ಪೆನ್ನಿನಲ್ಲಿ ಬರೆದದ್ದು. ಶಾಲೆಗೆ ಹೋಗಿ ನೋಟ್ಸ್ ತೋರಿಸಿದ್ದೆ ತಡ, ತಮಿಳು ಮಾಸ್ಟರ್ ನಖಶಿಕಾಂತ ಉರಿದು ಹೋದರು. ನಾಗರ ಬೆಟ್ಟ ತೆಗೆದುಕೊಂಡು ಹೊಡೆದದ್ದೇ ಹೊಡೆದದ್ದು. ಮೂರುದಿನ ಶಾಲೆಗೆ ಕುಂಟುತ್ತಲೇ ನಡೆದಿದ್ದೆ. ಅವಾಗೆಲ್ಲ ಗ್ರೀನ್ ಪೆನ್ನಿನಲ್ಲಿ ಬೆರೆಯುವುದೆಂದರೆ ಡಿಸಿ ಮೊದಲಾದ ದೊಡ್ಡ ಹುದ್ದೆಯಲ್ಲಿ ಇರುವವರು ಮಾತ್ರ ಬರೆಯುತ್ತಿದ್ದರು. ಉಳಿದವರು ಗ್ರೀನ್ ಪೆನ್ನಿನಲ್ಲಿ ಬರೆಯುವುದು ಮಹಾಪರಾಧವಗಿತ್ತು. ನಾನು ಬರೆದಿದ್ದೆ, ಪೆಟ್ಟು ಬಿದ್ದಿತ್ತು. ಆವತ್ತೇ ಕೊನೆ, ಆಮೇಲೆ ಯಾವತ್ತಿಗೂ ಗ್ರೀನ್ ಪೆನ್ನಿನಲ್ಲಿ ಬರೆಯಲಿಲ್ಲ. ಒಂದು ವೇಳೆ ನಾನು ಡಿಸಿ ಆದರೆ ? ಆಗಲ್ಲ ಬಿಡಿ.

Friday, August 22, 2008

ಬಾಗಿನ - ಈಗ ರಾಜಕಾರಣಿಗಳ ಪ್ರಚಾರದ ವಸ್ತು !

ಬಾಗಿನ.... ಅದು ಸೌಭಾಗ್ಯ ಸಂಕೇತ.. ಅದನ್ನು ಸ್ತ್ರೀಧನ ಅಂತಲೂ ಕರೆಯುತ್ತಾರೆ. ಹೆಣ್ಣು ಮಕ್ಕಳಿಗೆ ಗುರವದಿಂದ ಮಂಗಳ ದ್ರವ್ಯಗಳನ್ನು ಕೊಡುವ ಈ ಸಂಪ್ರದಾಯ ತಲೆತಲಾನ್ತರಗಲಿನ್ದಲೂ ನಡೆದು ಬಂದಿದೆ. ಹೆಣ್ಣುಮಕ್ಕಳು ತೌರುಮನೆ ಬಿಟ್ಟು ಗಂಡನ ಮನೆಗೆ ಹೋಗುವುದನ್ನು ತ್ಯಾಗ ಎನ್ನಲಾಗುತ್ತದೆ. ಇದಕ್ಕೆ ಪ್ರತಿಯಾಗಿ ತಾಯಿ ಮನೆಯಿಂದ ಬಿದಿರಿನ ಮೊರದಲ್ಲಿ ಅಕ್ಕಿ, ಅದಕೆ, ವೀಳ್ಯ, ತೆಂಗಿನಕಾಯಿ, ರವಕೆ ಕಣ, ಸೀರೆ, ಚಿನ್ನ ಇತ್ಯಾದಿಗಳನ್ನು ತುಂಬಿ ಹೆಣ್ಣುಮಕ್ಕಳು ಸುಖವಾಗಿರಲೆಂದು ಹಾರೈಸುವುದು ವಾಡಿಕೆ. ಗೌರಿಹಬ್ಬದ ಸಂದರ್ಭದಲ್ಲಿ ಈ ಸಂಪ್ರದಾಯವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಹಾಗೆಯೇ ಭಾರತೀಯ ಸಂಪ್ರದಾಯದಲ್ಲಿ ನದಿಗಳನ್ನೂ ದೇವತೆಯೆಂದು ಪುಉಜಿಸಲಾಗುತ್ತದೆ. ಎಲ್ಲಾ ನದಿಗಳನ್ನೂ ಗಂಗೆ ಎಂದೇ ಭಾವಿಸಲಾಗುತ್ತದೆ. ರಾಜಮಹಾರಾಜರುಗಳು ತುಂಬಿ ಹರಿಯುವ ನದಿಗಳಿಗೆ ಬಾಗಿನ ಅರ್ಪಿಸಿ ಕೃತಜ್ಞತೆ ಸಲ್ಲಿಸುತ್ತಿದ್ದರು. ಪ್ರಜಾಸತ್ತೆ ಜಾರಿಯಾದ ಬಳಿಕವೂ ಈ ಸಂಪ್ರದಾಯ ನಡೆದು ಬಂದಿದೆ. ರಾಜ್ಯದ ಮುಖ್ಯಮಂತ್ರಿಗಳು ಸಮಸ್ತ ಜನರ ಪರವಾಗಿ ನದಿಗಳಿಗೆ, ಜಲಾಶಯಗಳಿಗೆ ಬಾಗಿನ ಅರ್ಪಿಸುತ್ತಿದ್ದರು. ಇದು ಸತ್ಸಂಪ್ರದಾಯ ಅನ್ನುವ ಭಾವನೆ ನಿನ್ನೆ ಮೊನ್ನೆಯವರೆಗೂ ನನ್ನಲ್ಲಿತ್ತು.

ಮೊನ್ನೆ ಕೃಷಿ ಸಚಿವ ರವೀಂದ್ರನಾಥ್ ಅವರ ಬಾಗಿನ ಅರ್ಪಿಸುವ ಕಾರ್ಯಕ್ರಮ ನೋಡಿ ನಂಗೆ ನಿಜಕ್ಕೂ ...(ಕ್ಷಮಿಸಿ ಶಬ್ದ ಸಿಕ್ತಿಲ್ಲ) ಆವತ್ತು, ನಮ್ಮ ಸಚಿವರು ಸುಮಾರು ೬೦ ಬಸ್ ಗಳಲ್ಲಿ ಜನ ತುಂಬಿ ಕೊಂಡು ಹೋಗಿದ್ದರು. ಅಲ್ಲಿ ಭರ್ಜರಿ ಊಟದ ಏರ್ಪಾಡು ಮಾಡಲಾಗಿತ್ತು. ನನಗನ್ನಿಸಿದ್ದು ಇಷ್ಟೇ... ಸಂಪ್ರದಾಯದ ಹೆಸರಿನಲ್ಲಿ ಇಂತಹ ರಾಜಕಾರಣಿಗಳೆಲ್ಲ ಪ್ರಚಾರ ಪಡೆಯುವ ಗೀಳು ಹಚ್ಹ್ಚಿಕೊಂದಿದ್ದಾರ ? ಇಂತಹ ಸಂಪ್ರದಾಯಗಳೂ ಇವತ್ತು ರಾಜಕಾರಣಿಗಳ ಕೈಯಲ್ಲಿ ಬಲಿಯಾಗುತ್ತಿರುವುದು ನಿಜಕ್ಕೂ ದುರಂತ. ಸಾಂಪ್ರದಾಯಿಕ ಮೊರಗಳು ರಾಜಕಾರಣಿಗಳ ಕೈಯಲ್ಲಿ ನಲುಗುತ್ತಿವೆ. ಕೇವಲ ಮುಖ್ಯಮಂತ್ರಿಗಲಿಗಷ್ಟೇ ಸೀಮಿತವಾಗಿದ್ದ ಈ ಸಂಪ್ರದಾಯವನ್ನು ಇವತ್ತು ಎಲ್ಲ ಉಸ್ತುವಾರಿ ಸಚಿವರುಗಳು ಪಾಲಿಸುತ್ತಿದ್ದಾರೆ. ಆಯಾ ಪ್ರದೇಶಗಳ ಶಾಸಕರುಗಲೂ ಇದನ್ನೇ ಪಾಲಿಸುತ್ತಿದ್ದಾರೆ.

ಬಾಗಿನ ಸಲ್ಲಿಸಲೂ ಆಡಳಿತ ಮತ್ತು ಪ್ರತಿಪಕ್ಷಗಳ ಮುಖಂಡರ ನಡುವೆ ಪೈಪೋಟಿ ನಡೆಯುತ್ತಿದೆ. ಎಲ್ಲರಿಗಿಂತ ಮೊದಲು ನಾವಿರಬೇಕು ಅನ್ನುವ ಧಾವಂತ ದಿಂದಲೇ ಈಶ್ವರಪ್ಪನವರು ಜಲಾಶಯ ತುಂಬುವ ಮೊದಲೇ ಬಾಗಿನ ಅರ್ಪಿಸಿ ವಿವಾದಕ್ಕೆ ಗುರಿಯಾಗಿದ್ದರು. ಅದಾದ ಬಳಿಕ ಭದ್ರಾವತಿ ಶಾಸಕ ಸಂಗಮೇಶ್ ಕೂಡ ೧೨ ಬಸ್ ಗಳಲ್ಲಿ ಜನ ಹೇರಿಕೊಂಡು ಬಾಗಿನ ಅರಿಪಿಸಿ ಬಂದಿದ್ದರು. ಇದು ಸಂಪ್ರದಾಯದ ಹೆಸರಿನಲ್ಲಿ ಪ್ರಚಾರ ಪಡೆಯುವುದಲ್ಲದೆ ಮತ್ತಿನ್ನೇನು ? ಪುಕ್ಕಟೆ ಪ್ರಚಾರ ಪಡೆಯುವ ಯಾವ sಅಂದರ್ಭಗಳನ್ನೂ ರಾಜಕಾರಣಿಗಳು ಕಳೆದುಕೊಳ್ಳುವುದಿಲ್ಲ ಅನ್ನುವುದಂತೂ ವಾಸ್ತವ. ಆದರೆ ಇಂತಹ ದರ್ದು ರಾಜಕಾರಣಿಗಳಿಗೆ ಇದೆಯಾ ? ಇದ್ದರೆ ಅದಕ್ಕೆ ನಾವು ಯಾಕೆ ಅವಕಾಶ ಮಾಡಿ ಕೊಡಬೇಕು ?

Monday, August 18, 2008

ಆಕೆಗೆ ಎರಡು

1. ಪ್ರಿಯೇ ನಿನ್ನ
ಮಾತುಗಳೆಂದರೆ
ಹಾಗೆಯೇ
ಇಬ್ಬನಿಯ
ಚುಂಬನದ ಹಾಗೆ !

2. ಪ್ರಿಯೇ ನೀನು
ಒಲಿದರೆ ಹುಣ್ಣಿಮೆ
ಇಲ್ಲದಿದ್ದರೆ
ಅಮಾವಾಸ್ಯೆ!

ಅಬ್ಬಾ ! ಅದೆಂಥಾ ರಭಸ

ಮೊನ್ನೆ ಮಂಗಳೂರಿನಲ್ಲಿ ಮಳೆ ಜೋರಾಗಿತ್ತು. ಜಿಲ್ಲೆಯ ಐದೂ ನದಿಗಳು ತುಂಬಿ ಹರಿಯುತ್ತಿದ್ದವು. ಅಲ್ಲಿ ದುರಂತವೊಂದು ಸಂಭವಿಸಿತ್ತು. ಶಾಲೆಗೆಂದು ಹೊರಟ ಮಕ್ಕಳು ಮರಳಿ ಮನೆಗೆ ಬರಲೇ ಇಲ್ಲ. ಫಲ್ಗುಣಿ ನದಿಯಲ್ಲಿ ಮುಳುಗಿದ ಅವರ ಶಾಲಾ ಬಸ್ಸುಆ ಮಕ್ಕಳ ಪ್ರಾಣವನ್ನೇ ಬಲಿ ತೆಗೆದುಕೊಂಡಿತ್ತು. ಸ್ವಾತಂತ್ರ್ಯೋತ್ಸವಕ್ಕೆ ಅಣಿಯಾಗುತ್ತಿದ್ದ ಮಕ್ಕಳು ಈ ಲೋಕವನ್ನೇ ಬಿಟ್ಟು ಹೋದರು.
ಆ ಮಕ್ಕಳು ಉಜ್ವಲ ಭವಿಷ್ಯವನ್ನು ಅರಸುತ್ತಾ ಶಾಲೆಗೆ ತೆರಳುತ್ತಿದ್ದರು. ಸ್ವಾತಂತ್ರ್ಯದ ಸಂಭ್ರಮ ಅವರಲ್ಲಿ ಮನೆ ಮಾಡಿತ್ತು... ಎಂದಿನಂತೆ ಶಾಲಾ ವಾಹನದಲ್ಲಿ ಕುಣಿಯುತ್ತಾ ನಲಿಯುತ್ತಾ ಹೋಗುತ್ತಿದ್ದರು. ಮಂಗಳೂರಿನ ಗುರುಪುರದ ಸಮೀಪ ಉಲ್ಲಾಯಿಬೆಟ್ಟಿನ ಬಾಮಿ ಬಳಿ ಅವರ ಬಸ್ಸು ಬರುತ್ತಿದ್ದಂತೆಯೇ ಅದು ಫಲ್ಗುಣಿ ನದಿಗೆ ಬತ್ತು. ನಿತ್ಯ ಫಲ್ಗುಣಿಯ ಹರಿವನ್ನು ನೋಡಿ ಖುಷಿ ಪಡುತ್ತಿದ್ದ ಮಕ್ಕಳಿಗೆ, ಗುರುವಾರ ಅದೇ ಫಲ್ಗುಣಿ ಮೃತ್ಯು ದೇವತೆಯಾಗಿ ಅವತರಿಸಿದ್ದಳು.
ಅ ಚಿತ್ರಗಳು ನನ್ನ ಕಣ್ಣ ಮುಂದೆ ಬಂದದ್ದೆ ತಡ, ಅರಿವಿಲ್ಲದೆ ನನ್ನ ಕಣ್ಣಲ್ಲಿ ಕಂಬನಿ ಹರಿಯ ತೊಡಗಿತ್ತು. ತುಂಬಾ ವರ್ಷದ ಬಳಿಕ ನಾನು ಬಾಲ್ಯದ ನೆನಪುಗಳನ್ನು ಮೆಲುಕು ಹಾಕತೊಡಗಿದೆ. ನಾನೂ ಅಷ್ಟೆ, ಚಿಕ್ಕವನಿದ್ದಾಗ ಚಡ್ಡಿ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದಾಗ, ಕೆರೆ ತೊರೆಗಳನ್ನು ದಾಟಿಕೊಂಡು ಹೋಗಬೇಕಿತ್ತು. ಕರಾವಳಿಯ ಮಳೆ ಅಂದರೆ, ಅದು ಭೋರ್ಗರೆತ. ಅದೂ ಹದಿನೈದು ವರ್ಷಗಳ ಹಿಂದಿನ ಮಳೆ. ಗುಡ್ಡ, ಕಾಡು ಮೇಡುಗಳನ್ನು ಹತ್ತಿ ಇಳಿದು ಶಾಲೆಗೆ ಹೋಗಬೇಕಿತ್ತು. ಒಂದೊಂದು ಸಲ ತೊರೆಗಳೆಲ್ಲ ತುಂಬಿ ಹರಿಯುತ್ತಿದ್ದವು. ಮಳೆ ನಿಂತು ಉಬ್ಬರ ಕಡಿಮೆಯಾದ ಬಳಿಕ ಮನೆ ತಲುಪಿ ಕೊಳ್ಳುತ್ತಿದ್ದೆವು. ಆ ಕಡೆಯಿಂದ ಅಜ್ಜ ಟಾರ್ಚು ಹಿಡಿದು ಕೊಂಡು ಬಂದ ದಿನಗಳೂ ಬಹಳಷ್ಟಿವೆ. ಮೊನ್ನೆಯ ಘಟನೆ ನೋಡಿದ ತಕ್ಷಣ ನನ್ನ ಮನಸ್ಸಿಗೆ ಬಂದದ್ದು ನಾನು ಬಾಲ್ಯದಲ್ಲಿ ಕಳೆದ ಆ ದಿನಗಳು. ಒಂದು ವೇಳೆ, ನಾನೂ ತೊರೆ ದಾಟುವಾಗ ಕೊಚ್ಚಿ ಹೋಗುತ್ತಿದ್ದರೆ ?

ಪಾಪ ಆ ಮಕ್ಕಳಿಗೆ ಬಸ್ಸಾದರೂ ಇತ್ತು. ನಾವು ನಡೆದುಕೊಂಡೇ ಬರಬೇಕಿತ್ತು. ಗುಡ್ಡದಿಂದ ನೀರು ಸರಾಗವಾಗಿ ಹರಿದು ಹೋಗುವ ಕರಣ, ಒಮ್ಮೆ ನೀರಿಗೆ ಬಿದ್ದರೆ ಸಾಕಿತ್ತು, ಅದರಿಂದ ಮೇಲೆಳುವುದಂತು ಸಾಧ್ಯವೇ ಇರಲಿಲ್ಲ. ಅಬ್ಬಾ ! ಅದನ್ನು ನೆನೆಸಿಕೊಂಡರೆ ಸಾಕು, ಮೈಎಲ್ಲ ಜುಮ್ ಅನ್ನುತ್ತದೆ. ಅ ಮಕ್ಕಳನ್ನು ನೋಡಿದಾಗ ನಂಗೆ ನೆನಪಾದದ್ದು ನನ್ನ ಬಾಲ್ಯ, ಆ ಭಯ. ಅದನ್ನು ನಿಮ್ಮ ಜೊತೆ ಹೇಳಿ ಕೊಳ್ಳಬೇಕಿತ್ತು ಅಷ್ಟೆ.