ಅಲ್ಲಿ ಇನ್ನೂ ದೆವ್ವ ಇದೆ ! ನೀವು ನಂಬ್ತೀರೋ ಇಲ್ವೋ ಗೊತ್ತಿಲ್ಲ. ಆದ್ರೆ ನಾವು ಚಿಕ್ಕವರಿದ್ದಾಗ ಅದನ್ನು ಸಂಪೂರ್ಣ ನಂಬಿದ್ದೆವು... ಹೆದರಿಕೊಂಡಿದ್ದೆವು. ಅಂತಹದ್ದೊಂದು ಜಾಗ ಇದ್ದದ್ದು ನಮ್ಮ ಶಾಲೆಯ ಹಿಂಬದಿ ಗುಡ್ಡದಲ್ಲಿ. ನಾನು ಓದಿದ್ದು ಸುಳ್ಯ ತಾಲೂಕಿನ ಜಯನಗರ ಶಾಲೆಯಲ್ಲಿ. ಮದ್ಯಾಹ್ನ ಊಟ ಆದ ಬಳಿಕ, ಆಟದ ವೇಳೆಯಲ್ಲಿ ನಾವು ಕಳ್ಳ ಪೋಲಿಸ್ ಆಟ ಆಡುತ್ತಿದ್ದೆವು. ನಮಗೆ ಅಡಗಿಕೊಳ್ಳಲು ಜಾಗ ಸಿಗುತ್ತಿದ್ದದ್ದೇ ಶಾಲೆಯ ಹಿಂಬದಿ ಗುಡ್ಡದಲ್ಲಿ. ಅಲ್ಲಿ ಗೇರು ಬೀಜದ ತೋಪು ಇತ್ತು. ಗೇರು ಬೀಜದ ಮರದ ಕೊಂಬೆಗಳ ಮೇಲೆ ಅಡಗಿಕೊಳ್ಳುತ್ತಿದ್ದೆವು .
ಆ ತೋಪಿನ ತುತ್ತ ತುದಿಯಲ್ಲಿ ಒಂದು ಗುಡಿಸಲು ಇತ್ತು. ಅರ್ಧ ಗೋಡೆ ಮಣ್ಣಿನಲ್ಲಿ ಕತ್ತಲಾಗಿತ್ತು.. ಉಳಿದರ್ಧ ಗೋಡೆಗೆ ತೆಂಗಿನ ಗರಿಗಳಿಂದ ಮಾಡಿದ್ದ ತಟ್ಟಿಗಳನ್ನು ಪೇರಿಸಲಾಗಿತ್ತು. ತೋಪಿನ ಅರೆಕತ್ತಲೆಯಲ್ಲಿ ಆ ಗುಡಿಸಲು ಒಂದು ವಿಚಿತ್ರ ಭಯವನ್ನು ಮೊದಲ ನೋಟಕ್ಕೆ ಹುಟ್ಟಿಸುತ್ತಿತ್ತು. ನಮ್ಮ ಗೆಳೆಯರು ಕೂಡ ಆ ಮನೆಯ ಬಗ್ಗೆ ಬಗೆಬಗೆಯ ಕತೆಗಳನ್ನು ಆಗಾಗ ಹೇಳುತ್ತಿದ್ದರು. ಹಾಗಾಗಿ ನಾವ್ಯಾರೂ ಅತ್ತ ಸುಳಿಯುತ್ತಿರಲಿಲ್ಲ. ಆ ಭಯs ಶಾಲೆ ಬಿಟ್ಟ ಮೇಲೂ ಹಾಗೆಯೇ ಉಳಿದಿತ್ತು.
ಇತ್ತೀಚಿಗೆ ನಮ್ಮ ಶಾಲೆಯ ಬೆಳ್ಳಿ ಹಬ್ಬದ ಸಂಭ್ರಮ ಆಚರಣೆ ಇತ್ತು. ನಾವೆಲ್ಲಾ ಓದುತ್ತಿದ್ದಾಗ ರಾಷ್ಟ್ರೀಯ ಹಬ್ಬಗಳಿಗೆ ಅಣಿಯಾಗುತ್ತಿದ್ದ ಸಿದ್ಧವಾಗುತ್ತಿದ್ದ ಸಂಭ್ರಮ ನಮಗೆ ನೆನಪಾಯ್ತು. ಆ ಖುಷಿಯೊಂದಿಗೆ ಶಾಲೆಯ ಆವರಣವನ್ನೆಲ್ಲಾ ಬಣ್ಣದ ಕಾಗದಗಳಿಂದ ಸಿಂಗರಿಸಿದ್ದೆವು. ಕಾರ್ಯಕ್ರಮ ಆರಂಭಗೊಳ್ಳಲು ಸಮಯವಿತ್ತು. ಹಾಗಾಗಿ ನಾವು ಕಳ್ಳ ಪೊಲೀಸ್ ಆಟ ಆಡಲು ಆರಂಭಿಸಿದೆವು. ಅಟಗಿಕೊಳ್ಳಲು ಮತ್ತದೇ ಗೇರುಬೀಜದ ತೋಪಿನತ್ತ ಹೋದೆವು. ಆಗ ನಮ್ಮನ್ನು ಮತ್ತೆ ಕಾಡಿದ್ದು ದೆವ್ವ !
ಆಟ ಬಿಟ್ಟು ಈಗ ಪಾಳು ಬಿದ್ದಿರುವ ಆ ಗುಡಿಸಲಿನತ್ತ ನಾವು ಹೋದೆವು. ಶಾಲೆಯಲ್ಲಿ ಓದುತ್ತಿದ್ದಾಗ ಸಾಧ್ಯವಾಗದ ರಹಸ್ಯ ಭೇಧಿಸಲು ಈಗ ಸಮಯ ಕೂಡಿ ಬಂದಿತ್ತು. ಅಂತೂ ಇಂತು ಆ ಗುಡಿಸಲಿನ ಹತ್ತಿರ ಬಂದೆವು. ಹೆಜ್ಜೆಗಳು ಮಾತ್ರ ಹಿಂದೆ ಹಿಂದೆ ಸರಿಯುತ್ತಿದ್ದವು. ಈಗ ಆ ಗುಡಿಸಲು ಕುಸಿದು ಬಿದ್ದಿದೆ. ಅರೆ ಬರೆ ಮಣ್ಣಿನ ಗೋಡೆ ಮಾತ್ರ ಉಳಿದಿದೆ. ಇನ್ನೇನು ಒಳಗೆ ಪ್ರವೇಶಿಸಬೇಕು ಅನ್ನುವಷ್ಟರಲ್ಲಿ ಗೆಳೆಯ ಪ್ರವೀಣ ಅಂದ... ಏರೋ ಪಾತೆರ್‍ಲೆಕ್ಕ ಆಂಡ್ ! ( ಯಾರೋ ಮಾತನಾಡಿದ ಹಾಗಾಯ್ತು !) ನಾವು ಎದ್ದೆವೋ ಬಿದ್ದೆವೋ ಅಂತ ಓಡಿದೆವು. ಸುಸ್ತು ಆಗಿ ಶಾಲೆಯ ಪಡಸಾಲೆಯಲ್ಲಿ ಬಿದ್ದುಕೊಂಡೆವು. ಕೊನೆಗೂ ರಹಸ್ಯ ಭೇದಿಸಲು ಸಾಧ್ಯವೇ ಆಗಲಿಲ್ಲ. ಕಾಯ೯ಕ್ರಮ ಎಲ್ಲಾ ಮುಗಿಯಿತು. ಶಾಲೆಯ ಅಭಿವೃದ್ದಿಗೆ ನಮ್ಮಿಂದಾಗುವಷ್ಟು ಸಹಾಯ ಮಾಡಿ ಮತ್ತೆ ನಮ್ಮ ನಮ್ಮ ಊರಿನತ್ತ ಹೊರಟು ನಿಂತಿದ್ದೆವು.
ಊರಿಗೆ ಮರಳುವ ಮುನ್ನ ಮತ್ತೊಮ್ಮೆ ದೆವ್ವವನ್ನು ನೋಡುವ ಇಚ್ಛೆಯಾಯಿತು. ಅದ್ಹೇಗೋ ನಮ್ಮ ಅವಾಂತರಗಳನ್ನೆಲ್ಲಾ ತಿಳಿದುಕೊಂಡ, ನಮ್ಮ ತಮಿಳು ಮಾಷ್ಟ್ರು ನಡೆದ ಕತೆಯನ್ನೆಲ್ಲಾ ನಮಗೆ ಹೇಳಿದರು. ಆ ಮನೆಯಲ್ಲಿದ್ದ ಅಜ್ಜಿ ವಿಧಿವಶರಾಗಿ ವರುಷಗಳೇ ಕಳೆದಿವೆಯಂತೆ. ದಿಕ್ಕಿಲ್ಲದ ಹೆಂಗಸು ಅವರಿವರ ತೋಟದಲ್ಲಿ ಕೆಲಸ ಮಾಡಿಕೊಂಡು ಬದುಕು ಸವೆಸುತ್ತಿದ್ದಳು, ಹಾಗಾಗಿ ನಮಗೆ ಅವಳನ್ನು ನೋಡುವ ಭಾಗ್ಯವೇ ಸಿಕ್ಕಿರಲಿಲ್ಲ. ವಿಷಯ ಗೊತ್ತಿಲ್ಲದ ನಮ್ಮಂತಹ ಅದೆಷ್ಟೋ ಮಕ್ಕಳು ಆ ತೋಪಿನಿಂದ ಗೇರು ಬೀಜಗಳನ್ನು ಕದಿಯುತ್ತಿರಲಿಲ್ಲ ಅನ್ನುವುದೇ ನೆಮ್ಮದಿಯ ಸಂಗತಿ. ಯಾಕೆಂದರೆ ಅಲ್ಲಿ ದೆವ್ವವಿತ್ತಲ್ಲ ! ನಮ್ಮಂತೆ ಅದೆಷ್ಟೋ ಮಕ್ಕಳ ಮನಸ್ಸಿನಲ್ಲಿ ಭಯದ ಮೂಲಕವೇ ಸ್ಥಾನ ಗಿಟ್ಟಿಸಿದ್ದ ಅಜ್ಜಿಯ ನೆನಪಿಗೆ ನಮ್ಮ ಶಾಲೆಗೆ ದೊಡ್ಡದೊಂದು ಗಡಿಯಾರ ನೇತು ಹಾಕಿ ಬಂದಿದ್ದೇವೆ. ಅಜ್ಜಿ ಬದುಕಿರುವಾಗ ನಾವು ಏನು ಮಾಡಲೂ ಸಾಧ್ಯವಾಗಿರಲಿಲ್ಲ.
ಮೊನ್ನೆ ವಿಜಯಕನಾ೯ಟಕದಲ್ಲಿ ಕತೆಯೊಂದು ಬಂದಿತ್ತು. ಅದನ್ನು ಓದಿ... ನಾನು ನನ್ನ ಬಾಲ್ಯಕ್ಕೆ ಮರಳಿದ್ದೆ.
No comments:
Post a Comment