ಗೆಳತಿಯನ್ನು ಮೆಜೆಸ್ಟಿಕ್ ಗೆ ಬಿಡಲು ಹೊರಟಿದ್ದೆ. ಇನ್ನು ಮೇಕ್ರಿ ಸರ್ಕಲ್ ದಾಟಿರಲಿಲ್ಲ. ಅಷ್ಟರಲ್ಲಾಗಲೇ ಕೈಮೇಲೆ ಮೊದಲ ಹನಿ ಬಿತ್ತು. ಅರೆ ಮಳೆ ! ನನ್ನ ಮನಸ್ಸೀಗ ಸೂತ್ರ ಹರಿದ ಗಾಳಿಪಟ. ಅಷ್ಟೊಂದು ಸಂಭ್ರಮ. ರೋಮಾಂಚನ.
ಅದೆಷ್ಟು, ಖುಷಿಯಾಗಿತ್ತೆಂದ್ರೆ, ನನಗೆ ಆಮೇಲೆ ಬೇರೇನೂ ಬೇಕಿರಲಿಲ್ಲ. ಮನದನ್ನೆಯ ಸೆರಗು ಹಾಗೆಯೇ ಸೋಕಿ ಹೋದಂತಹ ತಂಗಾಳಿ, ಎವೆ ಇಕ್ಕೋ ಮುನ್ನವೇ ಮುತ್ತಿನಂಥ ಹನಿಗಳ ಅಭಿಷೇಕ. ವ್ಹಾವ್ ! ಒಣಗಿ ಕಾವಲಿಯಂತಾದ ಬಂಜರು ಭೂಮಿಗೆ ಮೊದಲ ಹನಿ ಬೀಳತ್ತಲ್ಲ, ಧಾರಿಣಿಯ ಆ ಖುಷಿ ನನ್ನಲ್ಲಿ.
ತಲೆ ಮೇಲೆ ಬಿದ್ದ ಹನಿಗಳು ನಿಧಾನಕ್ಕೆ ಜಾರಿ ಕಿವಿಯ ಓಣಿಯಿಂದ ಬಾಗಿ ಭುಜವನ್ನ ಹನಿಸಿ ಹೊಟ್ಟೆಯಾಳಕ್ಕೆ ಇಳಿಯುವಾಗ ಅದೇನು ರೋಮಾಂಚನ. ಮೈಮೇಲೆ ಮೊದಲ ಮಳೆ ಬಿದ್ದ ಸಂಭ್ರಮದ ಪೂರ್ತಿ ಅನಾವರಣ. ಹೊಸಾ ಮಳೆ- ಹಸೀ ಮಳೆ. ಒಂದಿಡೀ ವರ್ಷದ ಸಮೃದ್ಧ ಘಮಕ್ಕೆ ಸಾಕು ಈ ಮಳೆ. ಗೆಳತಿ ಊರಿಗೆ ಹೊರಟಳು ಅನ್ನೋ ಬೇಜಾರಿನ ಕ್ಷಣಕ್ಕೆ ಈ ಮಳೆ ಜೊತೆಗಾತಿ.
ಹಾಗಂತ ಬೆಂಗಳೂರಿಗೆನು ಇದು ಮೊದಲ ಮಳೆಯಲ್ಲ. ಒಮ್ಮೆ ಆಫೀಸ್ ಸೇರಿಕೊಂಡರೆ, ಹೊರಗೆ ಏನು ನಡೆಯುತ್ತಿದೆ ಅನ್ನೋದೇ ಗೊತ್ತಾಗಲ್ಲ. ಅಷ್ಟರ ಮಟ್ಟಿಗೆ ಎ ಸಿ ರೂಮಿನಲ್ಲಿ ಬಂಧಿಗಳು ನಾವು !
ಅಂದ ಹಾಗೆ ಕರಾವಳಿಯ, ಆಚೆ ಪಟ್ಟಣವು ಅಲ್ಲದ ಈಚೆ ಹಳ್ಳಿಯು ಅಲ್ಲದ ಪುಟ್ಟ ಊರಿನಿಂದ ಬಂದ ನಮ್ಮಂಥ ಹುಡುಗರಿಗೆ, ಅಸಲಿ ಇದು ಮಳೆಯೇ ಅಲ್ಲ. ನಮ್ಮ ಕಡೆ ಹೇಳುವ ಪಿರಿಪಿರಿ ಮಳೆ (ತುಂತುರು ಮಳೆ]. ಸಿಲಿಕಾನ್ ಸಿಟಿಯ ದೊಡ್ಡ ಮಳೆ ಕೂಡ ನಮ್ಮ ಜನರಿಗೆ, ಏನೋ ಬಂದು ಹೋಯ್ತು ಅನ್ನುವಂಥ ಮಳೆ ಅಷ್ಟೇ. ಬೆಂಗಳುರಿನಂಥ ಕಾಂಕ್ರೀಟ್ ಕಾಡು ಸೇರಿಕೊಂಡ ನಮಗೆ ಈಗೀಗ ಇದೂ ದೊಡ್ಡ ಮಳೆಯೇ. ಅದಕ್ಕೆ ಅಷ್ಟೊಂದು ಸಂಭ್ರಮಿಸಿದ್ದು.
ಹಾಗೆ ನೋಡಿದರೆ ಬೆಂಗಳೂರಿನದ್ದು, ಹಸಿವಾದಾಗ ಅಳುವ ಪುಟ್ಟ ಕಂದನಂತ ಮಳೆ. ಅದರಲ್ಲೂ, ಪಕ್ಕದ ಮನೆಯ ಮಕ್ಕಳನ್ನು ಎತ್ತಿಕೊಂಡಾಗ ಸಿಟ್ಟು ಬರತ್ತಲ್ಲ ಅಂತ ಮಳೆ. ಧಡಕ್ ಅಂತ ಸುರಿಯತ್ತೆ, ಅಷ್ಟೇ ವೇಗದಲ್ಲಿ ನಿಂತು ಬಿಡತ್ತೆ. ಅದರಲ್ಲೂ ಸ್ಕೂಲು, ಆಫೀಸ್ ಬಿಡೋ ವೇಳೆಗೆ ಸುರಿದು ಮರಗಳನ್ನು ಕಡಿದು ಹಾಕಿದ ಕೋಪ ತೀರಿಸಿಕೊಳ್ಳತ್ತೆ.
ಕರಾವಳಿಯದ್ದೋ ಅಮ್ಮನ ಹಾರೈಕೆ, ಹೆಂಡತಿಯ ಪ್ರೀತಿಯಂತ ಮಳೆ. ದಿನಪೂರ್ತಿ, ವಾರಗಟ್ಟಲೆ ಒಂದೇ ಸಮನೆ ಸುರಿಯುತ್ತಿರುತ್ತದೆ. ದೂರದಿಂದಲೇ ವಾರ್ನಿಂಗ್ ಕೊಡೊ ಧೋ ಅನ್ನೋ ಸದ್ದು, ಏನೋ ಆಗಿಯೇ ಬಿಡ್ತು ಎಂಬಂತೆ ಧಾವಂತದಿಂದ ಓಡಾಡೋ ದುಂಬಿಗಳು, ಪಟಪಟನೆ ಉದುರೋ ಮಾವು, ತಂಗಾಳಿ ಜೊತೆಗೆ ಬರೋ ಪರಿಮಳ..... ಆಹಾ... ಜಗತ್ತಿನಲ್ಲಿ ಇದಕ್ಕಿಂತ ಸೌಂದರ್ಯ ಬೇರೆ ಇಲ್ಲವೇ ಇಲ್ಲವೇನೋ.
ಕರಾವಳಿ ಮಳೆ ನೆನಪಿಗೆ ಬಂತು ಅಂದ್ರೆ ಇಲ್ಲಿ ಇರೋದು ಉಂಟೆ. ಅರೆ, ನಾನಾಗಲೇ, ಕೂತಲ್ಲೇ ಊರಿಗೆ ತಲುಪಿ ಬಿಟ್ಟೆ. ಅದೇ ಅಲ್ವ ನಾವು ಹರಿದ ಚಡ್ಡಿ ಹಾಕ್ಕೊಂಡು ಭರಪೂರ ಮಳೆಯಲ್ಲಿ ನೆನೆಯುತ್ತ ಜಾರಿ ಬೀಳ್ತಿದ್ದ ಗುಡ್ಡ . ಹೌದು ಅದೇ. ನೋಡಿ ನನ್ನ ಕೈಯಲ್ಲಿ ಪೇಪರ್ ಬೇರೆ ಇದೆ.... ನಾನೀಗ ದೋಣಿ ಮಾಡಬೇಕು.... ಮಳೆಯ ಹನಿ ಹನಿ ನೆನಪುಗಳನ್ನು ಆಮೇಲೆ ಹೇಳ್ತೇನೆ...