ಹೌದು ಈ ಮಾತು ಹೇಳಲು ಕಾರಣವಿದೆ. ರಾಜ್ಯದ ಪಾಲಿಗೆ ಈ ವರ್ಷವಂತೂ ದುಸ್ವಪ್ನ ! ಪಾಲಿಟಿಕ್ಸ್ ನ ಗಲೀಜ್ ಟ್ರಿಕ್ಸ್ ಗೆ ಇಡೀ ರಾಜ್ಯವೇ ಬಲಿಯಾಗಿದೆ. ಅಭಿವೃದ್ದಿ ಅನ್ನೋದು ಕನಸಿನ ಗಂಟಾಗಿ ಉಳಿದಿದೆ.
ಅದ್ ಹ್ಯಾಗೋ, ಸರ್ಕಾರ ತೆವಳುತ್ತಾ ಕುಂಟುತ್ತ ಸಾಗಿತ್ತು. ಗುಲ್ಬರ್ಗದಲ್ಲಿ ಸಚಿವ ಸಂಪುಟ ಸಭೆ ಕೂಡ ನಡೆದಿತ್ತು. ಹೊಸ ಸಫಾರಿ ಹೊಲಿಸಿಕೊಂಡ ಸಿಎಂ, ಗುಲ್ಬರ್ಗಕ್ಕೆ ಹೋಗಿದ್ರೆ, ಇಲ್ಲಿ ಮತ್ತೊಂದಿಷ್ಟು ಸಚಿವರು ಶಾಸಕರು ಚೆನ್ನೈ ಗೆ ಹಾರಿ ಹೋಗಿದ್ರು. ಸರ್ಕಾರ ಅಪಾಯಕ್ಕೆ ಸಿಲುಕಿತು.
ಆಮೇಲೆ ನಡೆಯಿತು ನೋಡಿ ಮಾಟ, ಮಂತ್ರ, ತಂತ್ರದ ಅನಾಚಾರ ! ಇಡೀ ರಾಜ್ಯಕ್ಕೆ ಇದಕ್ಕಿಂತ ದೊಡ್ಡ ಕಂಟಕ ಏನಿದೆ ಹೇಳಿ ? ಜನ ಛೀ ಥೂ ಅಂತ ಉಗಿದು ಉಪ್ಪಿನಕಾಯಿ ಹಾಕಿದರು ನಮ್ಮನ್ನಾಳುವ ಜನರಿಗೆ ಬುದ್ದಿ ಬರಲಿಲ್ಲ. ತಮಿಳುನಾಡು ಕೇರಳ ಅಂತ ಸುತ್ತಾಡಿದ್ದೆ ಸುತ್ತಾಡಿದ್ದು. ತಮ್ಮದೇ ಶಾಸಕರನ್ನು ನಂಬದ ಸಿಎಂಗೆ, ಅದ್ಯಾವುದೋ ದೇವರ ಮೇಲೆ, ಮಾಂತ್ರಿಕರ ಮೇಲೆ ನಂಬಿಕೆ ! ಜನರ ಆಶೀರ್ವಾದದಿಂದ ಗೆದ್ದ ಸಿಎಂ ಗೆ ಜನರ ಮೇಲು ವಿಶ್ವಾಸವಿರಲಿಲ್ಲ. ಇದ್ದಿದ್ರೆ, ಅವರು ಯಾವತ್ತೂ ರಾಜ್ಯವನ್ನು ಈ ಸ್ಥಿತಿಗೆ ತರುತ್ತಿರಲಿಲ್ಲ.
ಸಿಎಂ ವಿಚಾರ ಅತ್ತ ಕಡೆ ಇರಲಿ. ಪ್ರಜ್ಞಾವಂತ ರಾಜ್ಯದ ಮತ್ತೊಂದು ಕತೆ ಕೇಳಿ.
ಅದೊಂದು ಫೈನ್ ಡೇ . ನಾವೆಲ್ಲ ಗೌರವದಿಂದ ಕಾಣುವ ವಿಧಾನ ಸೌಧದ ಗೇಟುಗಳಲ್ಲೇ ಬಿದ್ದಿತ್ತು ನೋಡಿ ಹಳದಿ, ನಿಂಬೆ, ಗೊಂಬೆ, ಕುಂಕುಮ ! ಅದನ್ನು ನೋಡಿದ ಎಂಥವರಿಗೂ ಬೇರೆ ಯೋಚನೆಯೇ ಇಲ್ಲದೆ ಗೊತ್ತಾಗಿತ್ತು. ಅಲ್ಲಿ ವಾಮಾಚಾರ ನಡೆದಿತ್ತು. ವಿಧಾನಸೌಧಕ್ಕೆ ವಾಮಾಚಾರ !
ಬಹುಶ ರಾಜ್ಯದ ಜನತೆ ಕನಸಲ್ಲೂ ಇಂತಹ ಘಟನೆ ನೋಡಿರಲಿಕ್ಕಿಲ್ಲ. ಈಗಿನ ರಾಜಕಾರಣಿಗಳು ರಾಜ್ಯದ ಜನತೆ ತಲೆತಗ್ಗಿಸುವಂತಹ ಕೆಲಸ ಮಾಡಿದ್ದರೆ. ತಾವು ಅಧಿಕಾರಕ್ಕಾಗಿ ಏನೂ ಮಾಡಲು ಸಿದ್ಧ ಅಂತ ಘೋಷಿಸಿದ್ದಾರೆ. ೨೦೧೦ರ ಉದ್ದಕ್ಕೂ ಇಂತಹ ಘಟನೆಗಳು ನಡೆದೇ ಇವೆ. ಸೀನಿಯರ್ಸೆ ಮಾಡಿದ್ಮೇಲೆ ತಮಗೇನು ಅಂತ ಪಂಚಾಯತ್ ಚುನಾವಣೆಯಲ್ಲೂ ಮಾಟ ಮಂತ್ರದ ಪ್ರಯೋಗವಾಗಿದೆ.
ರಾಜಕಾರಣಿಗಳೇ ದಯವಿಟ್ಟು ಮನ ಮರ್ಯಾದೆಯಿಂದ ನಡೆದುಕೊಳ್ಳಿ. ಒಂದು ಕಾಲಕ್ಕೆ ಸ್ವಚ್ಚ ರಾಜಕಾರಣಕ್ಕೆ ಹೆಸರಾದ ನಾಡು ನಮ್ಮದು. ಮತ್ತೆಂದು ಹೀಗೆ ಮಾಡಬೇಡಿ. ರಾಜಕೀಯದ ಮಟ್ಟಿಗೆ, ಕನ್ನಡಿಗರು ೨೦೧೦ನ್ನು ಮರೆತುಬಿಡುತ್ತಾರೆ. ಇಂತಹ ವರ್ಷವನ್ನು ಮತ್ತೆ ತರಬೇಡಿ, ಪ್ಲೀಸ್ .