Friday, June 24, 2016

ಭಾರತೀಯ ಹುಲಿಗಳ ಜೊತೆ ಜಂಬೋ ಸವಾರಿ

ಭಾರತೀಯ ಹುಲಿಗಳ ಜೊತೆ ಜಂಬೋ ಸವಾರಿ
ಟೀಂ ಇಂಡಿಯಾದಲ್ಲಿ ಮತ್ತೆ ಫ್ಯಾಬ್ 5 ಯುಗ

ಆತ ಕ್ರಿಕೆಟ್ ಜಗತ್ತಿನ ದೇವರು. ಭತರ್ಿ ಕಾಲು ಶತಮಾನ ಕಾಲ ಭಾರತೀಯ ಕ್ರಿಕೆಟ್ಟನ್ನು ಅಕ್ಷರಶ: ತನ್ನ ಭುಜದ ಮೇಲೆ ಹೊತ್ತು ಮೆರೆದ. ನೂರು ಕೋಟಿ ಜನರ ನಿರೀಕ್ಷೆಗಳ ಭಾರವನ್ನು ತನ್ನ ವಾಮನ ದೇಹದ ಮೇಲೆ ಹೊತ್ತು ಸಾಗಿದ. ಸಹಸ್ರ ಸಹಸ್ರ ರನ್ ಪೇರಿಸಿ, ಕೋಟಿ ಕೋಟಿ ಜನರ ಸಹಸ್ರ ಸಹಸ್ರ ಆಸೆಗಳನ್ನು ಈಡೇರಿಸಿದ. ಇನ್ಮೇಲೆ ನಾನು ಕ್ರಿಕೆಟ್ ಆಡಲ್ಲ ಎಂದಾಗ, ಕೊನೆಯ ಬಾರಿಗೆ ವಾಂಖೆಡೆ ಮೈದಾನದಿಂದ ಹೊರ ನಡೆದಾಗ ಅದೆಷ್ಟೋ ಲಕ್ಷ ಜನರು ಕ್ರಿಕೆಟ್ ಗೂ ಗುಡ್ ಬೈ ಹೇಳಿದರು. ದೇವರಿಲ್ಲದ ಕ್ರಿಕೆಟ್ ಧರ್ಮವನ್ನೇ ತ್ಯಜಿಸಿದರು. ಸಧ್ಯ ಭಾರತೀಯ ಕ್ರಿಕೆಟ್ ನಲ್ಲಿರುವವರೆಲ್ಲಾ ಆ ದೇವರ ಪರಮ ಭಕ್ತರಷ್ಟೇ.

ಆತ ಸಾಕ್ಷಾತ್ ಶಿವಶಂಕರ. ಬಂಗಾಳದ ವೀರಭದ್ರ. ಎದುರಾಳಿ ಸವಾಲೆಸೆದ್ರು ಸಾಕು, ಮೈದಾನದಲ್ಲಿ ಕಾಣಿಸುತ್ತಿದ್ದದ್ದು ಬರೀ ರೌದ್ರಾವತಾರ. ಮೈದಾನದಾಚೆಯೂ ಶಿವತಾಂಡವಕ್ಕೆ ಕೊರತೆ ಏನೂ ಇರಲಿಲ್ಲ. ಭಾರತೀಯ ಕ್ರಿಕೆಟಿಗರಿಗೆ ಹುಲಿಗಳು ಅಂತಾರೆ. ಆತನ ಕಾಲದಲ್ಲಿ ನಿಜಕ್ಕೂ ಅವರು ಹುಲಿಗಳೇ ಆಗಿದ್ದರು. ಲೀಡರ್ ಎಂದರೆ ಹೀಗೇ ಇರಬೇಕು ಎಂಬಂತೆ ಉದಾಹರಣೆಯಾಗಿ ನಿಂತದ್ದೇ ಆ ರಿಯಲ್ ಟೈಗರ್.

ಮೇಲಿನವರಿಬ್ಬರು ಭೋರ್ಗರೆಯುತ್ತಲೇ ಇದ್ದರು. ಅವರ ಸಿಡಿಲಬ್ಬರಕ್ಕೆ ಜಗತ್ತು ಥರಥರ ನಡುಗಿ ಹೋಗುತ್ತಿತ್ತು. ಜೊತೆಯಾಗಿ ನಿಂತಷ್ಟೂ ಹೊತ್ತು ಎದುರಾಳಿ ಪಾಳಯದಲ್ಲಿ ನೆಮ್ಮದಿ ಸುಳಿಯುತ್ತಲೇ ಇರಲಿಲ್ಲ. ಥ್ಯಾಂಕ್ ಗಾಡ್ ! ಅವರ ಉತ್ತುಂಗದ ಕಾಲದಲ್ಲಿ ಟಿ-20 ಕ್ರಿಕೆಟ್ ಹುಟ್ಟಿರಲಿಲ್ಲ. ಇದ್ದಿದ್ದರೆ, ಕ್ರಿಕೆಟ್ ಲೋಕದಲ್ಲಿ ಪ್ರಳಯ ಸೃಷ್ಟಿಯಾಗುತ್ತಿತ್ತು ! ಬೌಲಿಂಗ್ ಮಾಡಲು ಯಾರೂ ಇರುತ್ತಿರಲಿಲ್ಲ.

ಆತ ಗೋಡೆ. ಎಂತಹಾ ಬಿರುಗಾಳಿ, ಸಿಡಿಲಿನ ವೇಗದ ಬೌಲರ್ಗಳಿಗೂ ಹಿಮಾಲಯದಷ್ಟೇ ತಣ್ಣಗೆ ಅಡ್ಡ ನಿಂತ ಮಹಾ ಗೋಡೆ. ಒಂದರ್ಥದಲ್ಲಿ ಆತ ಭಾರತೀಯ ಕ್ರಿಕೆಟ್ ನ ಯುಗ ಪ್ರವರ್ತಕ. ಆತ ಭೋರ್ಗರೆಯುತ್ತಿರಲಿಲ್ಲ. ಸಮುದ್ರದ ಅಲೆಗಳಂತೆ ಶಾಂತವಾಗಿಯೇ ಅಪ್ಪಳಿಸುತ್ತಿದ್ದ. ಕ್ರೀಸಿನಲ್ಲಿದ್ದಷ್ಟೂ ಹೊತ್ತು ಮ್ಯಾಚ್ ಭಾರತದ ಕೈ ಜಾರುತ್ತಲೇ ಇರಲಿಲ್ಲ.

ಆತ ಬ್ಯಾಟ್ ಬೀಸುತ್ತಿದ್ದಷ್ಟೂ ಹೊತ್ತು ಮೈದಾನದಲ್ಲಿ ಅರಳುತ್ತಿದ್ದದ್ದು ಬರೀ ರಂಗವಲ್ಲಿಯಷ್ಟೇ. ಅಂತಹ ಕಲಾತ್ಮಕ ಮತ್ತೊಬ್ಬ ಆಟಗಾರ ಜಾಗತಿಕ ಕ್ರಿಕೆಟ್ ಗೆ ಮತ್ತೊಬ್ಬ ಸಿಕ್ಕಿಲ್ಲ. ಆ ಸ್ಟೈಲಿಶ್ ಆಟಗಾರ ಕ್ರಿಕೆಟ್ ನ ಘಟಾನುಘಟಿ ಬೌಲರ್ ಗಳಿಗೇ ಸವಾಲಾಗಿದ್ದ. ಅದರಲ್ಲೂ ಅತಿರಥರೆನಿಸಿದ ಕ್ಯಾಂಗರೂಗಳ ಪಾಲಿಗೆ ಆತ ಬಿಡಿಸಲಾರದ ಒಗಟೇ ಆಗಿಬಿಟ್ಟಿದ್ದ.

ವಿಕೆಟ್ ಬಿಟ್ಟುಕೊಡೋದ್ರಲ್ಲಿ ಮೇಲಿನ ಇಬ್ಬರೂ ಜಿಪುಣಾಗ್ರೇಸರರೇ. ಇಬ್ಬರೂ ಜೊತೆಯಾಗಿ ಪೈಪೋಟಿಗೆ ನಿಂತರೆ, ಮೈದಾನವಿಡೀ ಎದುರಾಳಿ ಬೌಲರ್ ಗಳ ಬೆವರಿನಿಂದ ಒದ್ದೆ ಒದ್ದೆ.

ಈ ಎರಡೂ ಸಾಲಿಗೆ ಸೇರದ ಮತ್ತೊಬ್ಬ ಅಗ್ರೇಸರನಿದ್ದ. ಎಲ್ಲರೊಳಗೊಂದಾಗದೇ ಇದ್ದುಕೊಂಡು, ಸದ್ದೇ ಇಲ್ಲದೆ ಸುದ್ದಿ ಮಾಡಿದ್ದ. ದವಡೆ ಮುರಿದರೂ ಮೈದಾನಕ್ಕೆ ಇಳಿದು ಒಂಟಿ ಸಲಗದಂತೆ ಕಾದಾಡಿದ್ದ. ದಾಯಾದಿ ವೈರಿಯ ಎಲ್ಲಾ ಹತ್ತು ವಿಕೆಟ್ ಗಳನ್ನು ಕಿತ್ತು ಮೆರೆದ ಸ್ಪಿನ್ ಬೌಲಿಂಗ್ ನ ಸಾರ್ವಭೌಮ ಆತ. ತಮ್ಮ ದೊಡ್ಡ ಪಾದಗಳಷ್ಟೇ ದೊಡ್ಡ ಮನಸ್ಸು ಹೊಂದಿರೋ ಜಂಬೋ ಆತ. ಹಿಂದೂ ಮಹಾಸಾಗರದಷ್ಟೇ ಪ್ರಶಾಂತ.

ಆಲ್ ಮೋಸ್ಟ್ ಎರಡು ದಶಕಗಳ ಕಾಲ ಭಾರತೀಯ ಕ್ರಿಕೆಟ್ ಎಂದರೆ ಆ ಐವರೇ. ಸಚಿನ್, ಗಂಗೂಲಿ, ದ್ರಾವಿಡ್, ಲಕ್ಷ್ಮಣ್, ಕುಂಬ್ಳೆ. ಫ್ಯಾಬ್ 5 ಅಂತಾನೇ ಫೇಮಸ್. ಅವರಿದ್ದ ಕಾಲ ಭಾರತೀಯ ಕ್ರಿಕೆಟ್ ನ ಉತ್ತುಂಗದ ಕಾಲವೂ ಆಗಿತ್ತು. 2011ರ ವಿಶ್ವಕಪ್ ಗೆದ್ದ ಬಳಿಕ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದರು. ಭಾರತಕ್ಕೆ ಮರಳಿ ವಿಶ್ವಕಪ್ ತರುವುದು ಅವರ ಜೀವಮಾನದ ಕನಸಾಗಿತ್ತು. ಸಚಿನ್ ಬಿಳಿ ಪ್ಯಾಂಟು, ಷಟರ್ು ಕಳಚಿಡೋ ಮೂಲಕ ಫ್ಯಾಬ್ -5 ಯುಗಾಂತ್ಯ ಕಂಡಿತು. ಅದಾದ ಬಳಿಕ, ಟೀಂ ಇಂಡಿಯಾ ಒಂದೇ ಒಂದು ಜಾಗತಿಕ ಟೂನರ್ಿ ಗೆದ್ದಿಲ್ಲ ಎನ್ನುವುದು ಸತ್ಯ.

ಕಾಲ ಚಕ್ರ ಮತ್ತೆ ಮತ್ತೆ ಸುತ್ತು ಹಾಕುತ್ತಂತೆ. ಆದರೆ ಭಾರತೀಯ ಕ್ರಿಕೆಟ್ ನ ಪಾಲಿಗೆ ಕಾಲ ಚಕ್ರ ತುಂಬಾ ಬೇಗನೇ ಒಂದು ಸುತ್ತು ಹಾಕಿ ಬಂದಿದೆ. ಭಾರತೀಯ ಕ್ರಿಕೆಟ್ ನ ರಥ ಎಳೆದ ಐವರು ಮಹಾನ್ ಕ್ರಿಕೆಟಿಗರು ಮತ್ತೆ ಒಂದಾಗಿದ್ದಾರೆ. ಕುಂಬ್ಳೆ ಮತ್ತೊಮ್ಮೆ ಜಂಬೋ ಸವಾರಿಗೆ ಸಿದ್ದರಾಗಿ ಬಂದಿರುವುದರೊಂದಿಗೆ ಮತ್ತೆ ಫ್ಯಾಬ್ -5 ಯುಗ ಆರಂಭವಾಗತೊಡಗಿದೆ.

ಇವರು ಕ್ರಿಕೆಟ್ ಬಿಟ್ಟರೂ, ಕ್ರಿಕೆಟ್ ಇವರನ್ನು ಬಿಡೋದಿಲ್ಲ. ದೇವರು ಮತ್ತೆ ಕಾಣಸಿಗದೇ ಹೋಗಬಹುದು. ಆದರೆ ದೇವರನ್ನು ಪೂಜಿಸದೇ ಇರಲು ಸಾಧ್ಯವಿಲ್ಲ. ಭಾರತೀಯ ಕ್ರಿಕೆಟ್ ಮೊದಲು ಸೆಳೆದುಕೊಂಡಿದ್ದೇ ರಾಹುಲ್ ದ್ರಾವಿಡ್ ರನ್ನು. ಭಾರತದ ಮಹಾಗೋಡೆ ಈಗ ಮರಿಹುಲಿಗಳನ್ನು ತಯಾರಿಸೋ ದ್ರೋಣಾಚಾರ್ಯರಾಗಿದ್ದಾರೆ. ಭಾರತೀಯ ಕ್ರಿಕೆಟ್ ನ ಭವಿಷ್ಯ ಈಗ ದ್ರಾವಿಡ್ ಕೈಯಲ್ಲಿ ಸುರಕ್ಷಿತವಾಗತೊಡಗಿದೆ. ಸಚಿನ್ ಬಿಟ್ಟ ಬಳಿಕ ಬಿಸಿಸಿಐ ನಲ್ಲೂ ಬಹಳಷ್ಟು ನೀರು ಹರಿದಿದೆ. ಹಳೇ ರಕ್ತವೆಲ್ಲಾ (ಕೆಟ್ಟದ್ದು ಇದ್ದಿರಲೂ ಬಹುದು) ಬೆಟ್ಟಿಂಗ್ ಪ್ರವಾಹಕ್ಕೆ ಕೊಚ್ಚಿ ಹೋಗಿ, ಹೊಸ ರಕ್ತ ಹರಿದು ಬಂದಿದೆ. ಇಂತಹ ಸಮಯದಲ್ಲೇ ಜಗತ್ತು ಕಂಡ ಅತ್ಯಂತ ಶ್ರೇಷ್ಠ ಓಪನಸರ್್ ಭಾರತೀಯ ಕ್ರಿಕೆಟ್ ಗೆ ಹೊಸ ಓಪನಿಂಗ್ ಕೊಡಲು ಕೈ ಜೋಡಿಸಿಬಿಟ್ಟರು. ಸಚಿನ್, ಗಂಗೂಲಿ ಜೊತೆಗೆ ಲಕ್ಷ್ಮಣ್ ಕೂಡಾ ಭಾರತೀಯ ಕ್ರಿಕೆಟ್ ಸಲಹಾ ಸಮಿತಿಯಲ್ಲಿ ಸೇರಿಕೊಂಡು, ಕ್ರಿಕೆಟ್ ಗೆ ಹೊಸ ದಿಕ್ಕು ನೀಡಲಾರಂಭಿಸಿದ್ದರು. ಜಂಬೋ ಮಾತ್ರ ಕನರ್ಾಟಕ ಕ್ರಿಕೆಟ್ ಆಡಳಿತ, ಬಿಸಿಸಿಐನ ತಾಂತ್ರಿಕ ಸಮಿತಿ ಆಮೇಲೆ ಐಸಿಸಿ ಕೆಲಸ ಅಂತ ಕೊಂಚ ದೂರವೇ ಇದ್ದರು.

ಈಗ ಜಂಬೋ ಕೂಡಾ ಮತ್ತೆ ಭಾರತೀಯ ಕ್ರಿಕೆಟ್ ನ ಭಾಗವಾಗಿದ್ದಾರೆ. ಇನ್ನೇನು ಧೋನಿ ನಿರ್ಗಮಿಸೋ ದಿನಗಳೂ ಆಸುಪಾಸಿನಲ್ಲೇ ಇವೆ. ಅಲ್ಲಿಗೆ ಸಚಿನ್ ನಂತರದ ಮೂರು ಪೀಳಿಗೆ ಕ್ರಿಕೆಟ್ ನ ತೆರೆ ಮರೆಗೆ ಸರಿಯಲಿದೆ. ಕೊಹ್ಲಿ ನೇತೃತ್ವದಲ್ಲಿ ಉದಯೋನ್ಮುಖ ಆಟಗಾರರೇ ಭಾರತೀಯರ ಆಸೆಗಳನ್ನು ಹೊತ್ತು ಸಾಗಬೇಕಿದೆ. ಹೆಚ್ಚು ಕಮ್ಮಿ ಮುಂದಿನ ವರ್ಷ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುವ ಸಾಧ್ಯತೆಗಳಿವೆ. ಹೀಗಾದಲ್ಲಿ, ನೇಪಥ್ಯದಲ್ಲೇ ಜೊತೆಯಾಗೋ ಈ ಫ್ಯಾಬ್ -5 ಮತ್ತೆ ಹೊಸ ಭಾರತದ ನೇತೃತ್ವ ವಹಿಸಲಿದ್ದಾರೆ. ಭಾರತೀಯ ಕ್ರಿಕೆಟ್ ನ ಭವಿಷ್ಯ ಮತ್ತೆ ಫ್ಯಾಬ್ 5 ಹೆಗಲಿಗೇರಿರುವುದು ಅಭಿಮಾನಿಗಳ ಪಾಲಿಗಂತೂ ದೀಪಾವಳಿಯಾಗಿದೆ. ಇತ್ತ ಕ್ರಿಕೆಟ್ ಗೆ ಹೊಸ ದೇವರೂ ಹುಟ್ಟಿಕೊಂಡಿದ್ದಾರೆ. ಜಂಬೋ ಸವಾರಿ ಕೆರಿಬಿಯನ್ ನಿಂದ ಆರಂಭವಾಗಲಿದೆ.


No comments: