ಅವಳು, ಅಂದರೆ ಅವಳು. ವಯಸ್ಸು ೧೬ ಇರಬಹುದಷ್ಟೇ. ಅವಳು ನನ್ನ ಸ್ಪೂರ್ತಿ. ನನ್ನ ಜೀವನ, ನನ್ನ ಸರ್ವಸ್ವ. ಅವಳ ಹೆಸ್ರು ? ಗೊತ್ತಿಲ್ಲ. ಅವಳು ಯಾರು ಗೊತ್ತಿಲ್ಲ. ಅದಕ್ಕೆ ಅವಳು ಅವಳೇ. ಅವಳು ನಕ್ಕರೆ ಮಿಂಚಿನ ಕಾಂತಿ. ಬಿರಿದ ಸೂರ್ಯನಂತೆ ಅವಳ ಕಣ್ಣುಗಳು. ಆದ್ರೂ ಕೆಲವೊಮ್ಮೆ ತಂಪು ಚಂದಿರನಂತೆ. ಮೋಡದಿಂದ ಉದುರುವ ಹನಿಗಳಂತೆ ಅವಳ ನಡೆ. ಅವಳ ಕಾಲ್ಗೆಜ್ಜೆ ಕಿಣಿಕಿಣಿಗೆ ಬಸ್ಸೂ ಮೌನ.
ಹೌದು, ಆಕೆ ನನಗೆ ದಿನಾ ಬಸ್ಸಿನಲ್ಲಿ ಸಿಗುತ್ತಿದ್ದಳು. ಆಗ ಪಿಯುಸಿ. ಮನಸ್ಸು ಹುಚ್ಚು ಕುದುರೆ. ಕ್ಷಣದಲ್ಲಿ ಎಲ್ಲೆಂದರಲ್ಲಿ ಅಡ್ಡಾಡಿ ಬರುವಂತಹದ್ದು. ಕನಸುಗಳು ಆವಿರ್ಭವಿಸುವ ಕಾಲ. ಅವಳ ಮೊಗ ಕಂಡಾಗ ಮಾತು ಮೌನ. ಮನಸ್ಸು ಸ್ತಬ್ಧ. ಭಾವನೆಗಳು ಮಲಗುತ್ತವೆ. ಯೋಚನೆಗಳು ಹುಟ್ಟುತ್ತವೆ. ಪದಗಳು ಗೀಚಲ್ಪಡುತ್ತವೆ. ಅವುಗಳಿಗೆ ಕತೆ. ಕವನ, ಚುಟುಕುಗಳೆಂದು ನಾನಾ ಹೆಸರನ್ನು ಇಟ್ಟು ಸಾಹಿತಿಯಾಗಲು ಪ್ರಯತ್ನಿಸುತ್ತೇನೆ. ಸಂಭಾವಿತನೆನಿಸಿಕೊಳ್ಳುವ ಬಯಕೆ. ಬರವಣಿಗೆ ಒಂದು ಹುಚ್ಚು. ನನ್ನ ಹುಚ್ಚಿಗೆ ಅವಳೇ ಸ್ಪೂರ್ತಿ.
ನಮ್ಮ ನಡುವಿನ ಸಂಬಂಧ ಕೊಂಡಿ ಕೆಂಪು ಬಸ್ಸು. ಪ್ರತಿದಿನ ಅವಳನ್ನು ನೋಡುತ್ತಿದ್ದೆ. ಮಾತನಾಡಲೆಂದು ಬಾಯಿ ತೆರೆಯುತ್ತಿದ್ದೆ. ಆಗುತ್ತಿರಲಿಲ್ಲ. ದಿನವೂ ಹೀಗೆಯೇ ನಡೆಯುತ್ತಿತ್ತು. ಅವಳ ಸೌಂದರ್ಯವನ್ನು ಬಣ್ಣಿಸುವುದಷ್ಟೇ ನನ್ನ ಲೇಖನಿಗೆ ಕೆಲಸವಾಗಿತ್ತು. ಮೌನ ಸದಾ ಮೌನ. ಇಷ್ಟಾದ್ರೂ, ಅವಳ ಒಲವೆಂಬ ಮೌನ ಸಂಜೀವಿನಿ ನನ್ನ ಹಾಡಿಗೆ ಜೀವ ತುಂಬುತ್ತಿತ್ತು. ನಾನೆಲ್ಲೋ ಹಾಡುತ್ತಿದ್ದೆ. ಅವಳೆತ್ತಲೋ ನೋಡುತ್ತಿರುತ್ತಾಳೆ. ಬಸ್ಸು ಓಡುತ್ತಲೇ ಇರುತ್ತದೆ. ಇಳಿಯುವಲ್ಲಿ ಇಳಿಯುತ್ತಾಳೆ. ನನಗೆ ಮತ್ತಷ್ಟು ದೂರ ಅದೇ ಬಂಡಿಯ ಪಯಣ. ಛೇ ಅವಳು ನನ್ನ ಮನೆಯ ಪಕ್ಕದಲ್ಲೆ ಇರಬಾರದಿತ್ತೇ ? ಮನ ಕಾತರಿಸುತ್ತದೆ.
ದಿನಗಳು ಉರುಳಿದವು. ಈಗ ಅವಳಿಗೆ ಬೆರೆ ಬಸ್ಸು. ನಾನು ಮತ್ತೆ ಮತ್ತೆ ಅವಳು ಕುಳಿತುಕೊಳ್ಳುತ್ತಿದ್ದ ಅದೇ ಸೀಟನ್ನು ನೋಡಿ ಕನವರಿಸುತ್ತೇನೆ. ಈಗ ಮಾತುಗಳಿಗೆ ಜೀವವಿದೆ. ಸ್ಪೂರ್ತಿ ಇಲ್ಲ. ಮನಸ್ಸಿನ ಅಲೆದಾಟಗಳು ಅಲ್ಲಲ್ಲೇ ಅಡಗಿ ಕುಳಿತಿವೆ. ಮನಸ್ಸು ಸುಮ್ಮನೇ ಕೊರಗುತ್ತಿದ್ದರೂ ಅದಕ್ಕೆ ಸಾವಿರ ಕನಸುಗಳಿವೆ. ಮಾತಿಲ್ಲದೆ ಮನಸ್ಸು ವಿಭ್ರಾಂತವಾಗಿದೆ. ಅಳಲಾರದೆ ನಗುತ್ತೇನೆ..ನಗಲಾರದೆ ಅಳುತ್ತೇನೆ. ಏಳಲಾರದೆ ಬೀಳುತ್ತೇನೆ. ಪುಸ್ತಕಗಳು, ಹಾಳೆಗಳು, ಪೆನ್ನು ಕಲ್ಪನೆಗೆ ಬಣ್ಣ ಹಚ್ಚುತ್ತಿದ್ದ ವಸ್ತುಗಳೆಲ್ಲಾ ಸ್ಟ್ರೈಕ್ ಮಾಡ್ತಿವೆ. ಸೋ, ನೆನಪುಗಳಾ ಚಿತ್ರ ಬಿಚ್ಚಿ, ಕಣ್ಣೆದುರಿಗಿಟ್ಟುಕೊಂಡು ಹಾಗೇ ದಿಂಬಿಗೊರಗುತ್ತೇನೆ. ಕಂಬನಿ ಹನಿಕಿಸಿ ಒದ್ದೆ ಮಾಡುತ್ತೇನೆ. ಸುಂದರ ನೆನಪುಗಳ ಲೋಕದಲ್ಲಿ ಚಿನ್ನದ ಉಯ್ಯಾಲೆ ಕಟ್ಟುತ್ತೇನೆ. ತೂಗುತ್ತೇನೆ. ನಿದ್ದೆ ಹತ್ತುವುದಿಲ್ಲ. ಕನಸುಗಳಿಗೆ ಜೀವ ತುಂಬಲು ಹೆಣಗುತ್ತೇನೆ. ಈ ಹೆಣಗಾಟದಲ್ಲಿ ನಿದ್ದೆ ಬಂದದ್ದೇ ತಿಳಿಯುವುದಿಲ್ಲ. ಮೌನಗಳು ಹೊದಿಕೆಯಾಗುತ್ತವೆ..... ಮಾತುಗಳು ಹಾಸಿಗೆಯಾಗುತ್ತವೆ.
ಪ್ರಶ್ನೆ ಕಾಡುತ್ತದೆ. ಯಾಕೆ ಹೀಗೆ ? ನಾನೇನೂ ಭಗ್ನ ಪ್ರೇಮಿ ಅಲ್ಲ. ಅಥವಾ ಅವಳನ್ನು ಪ್ರೀತಿಸಿ, ವಿಫಲವಾದವನೂ ಅಲ್ಲ. ಅಸಲಿ ಅವಳನ್ನು ಆ ದೃಷ್ಟಿಯಿಂದ ನೋಡಿದವನೂ ಅಲ್ಲ. ಅವಳನ್ನು ಕೇವಲ ಸ್ಪೂರ್ತಿಯಾಗಿ ಕಂಡೆ. ಅವಳಿಲ್ಲದೆ ಏನೂ ಇಲ್ಲ. ಬರೆಯಲು ಬೆರಳುಗಳು ಓಡುತ್ತಿಲ್ಲ. ಬರವಣಿಗೆ ಇಲ್ಲದೆ ಜೀವನವಿಲ್ಲ. ಬದುಕಬೇಕು. ಏನೋ ಬರೆಯಲು ಹೋಗುತ್ತೇನೆ.... ಅದು ಮತ್ತಿನ್ನೇನೋ ಆಗುತ್ತದೆ. ಕಳೆದ ದಿನಗಳ ಆಕೆಯ ನೆಪದಲ್ಲೇ ಪದಗಳ ಸೃಷ್ಟಿಸಲು ಪ್ರಯತ್ನಿಸುತ್ತೇನೆ. ಸೃಷ್ಟಿಕರ್ತನೆನಿಸಿಕೊಳ್ಳಲು. ಆದರೂ ಅವಳ ನೆನಪು ಕಾಡುತ್ತಲೇ ಇರುತ್ತದೆ.
ಬಹುಷ: ನೆನಪುಗಳು ಹೊಚ್ಚ ಹೊಸದಾಗಿ ಕಾಡಾಲು ಅವಳ ಮೌನವೇ ಕಾರಣವಿರಬಹುದು. ಅವಳ ಜೊತೆ ಮಾತನಾಡಿದ್ದಿದ್ದರೆ, ತಪ್ಪುಗಳು ನಡೆದು, ನಮ್ಮ ಸಂಬಂಧ ಹಳಸಬಹುದಿತ್ತು. ಈಗ ಆ ನೋವಿಲ್ಲ. ನಮ್ಮ ನಡುವೆ ಉಲಿದು ಹೋದ ಮೌನ ನಮ್ಮ ಸಂಬಂಧವನ್ನು ನಿತ್ಯ ನೂತನಗೊಳಿಸುತ್ತಿದೆ. ಮೌನಗಳ ಮಾತು ಎಷ್ಟು ಮಧುರ ? ಆ ನೆನಪು ಎಷ್ಟೊಂದು ಸಿಹಿ. ಆ ಮೌನ ಮತ್ತಷ್ಟು ದಿನ ಉಳಿಯಲಿ. ಆ ಹುಡುಗಿ ಮತ್ತೆ ನನ್ನ ಮುಂದೆ ಮೌನವಾಗಿ ನಲಿದಾಡಬೇಕು. ಸ್ಪೂರ್ತಿ ನೀಡಬೇಕು. ಇಂತಹ ಆಸೆಗಳಿಗೇನೂ ಕಮ್ಮಿ ಇಲ್ಲ. ಮೌನಗಳ ಆ ಮಧುರ ನೆನಪುಗಳೇ ಹಾಗೆ, ಬೇಕಾದಾಗ್, ಬೇಡವಾದಾಗಲೆಲ್ಲಾ ಧುತ್ತೆಂದು ಕಾಡಿ ಮರೆಯಾಗುತ್ತವೆ. ಉಳಿಯೋದು ಕನವರಿಕೆ ಮಾತ್ರ. ಆ ಕನವರಿಕೆಯಲ್ಲೇ ಪುಟ್ಟದೊಂದು ಸ್ವರ್ಗ ಸೃಷ್ಟಿಯಾಗುತ್ತದೆ. ಅಲ್ಲಿ ಎಲ್ಲವೂ ನಾನೇ. " ಆವ ರೂಪದೊಳು ಬಂದರೂ ಸರಿಯೇ, ಆವ ವೇಷದೊಳು ನಿಂದರೂ ಸರಿಯೇ.... ಹೊಸ ಬಾಳಿನ, ಹೊಸ ಗಾಳಿಯ, ಹೊಸ ಸ್ಪೂರ್ತಿಯ ತಾ ಹುಡುಗಿ ಅಂತ ಗರ್ಭದ ಕೂಸು ಪಿಸುಗುಡುತ್ತದೆ. ಆಕೆ ಎಲ್ಲಿ ? ವರ್ಷಗಳು ಉರುಳಿದ್ರೂ ನನ್ನ ಕಣ್ಣು ಹುಡುಕ್ತಾನೇ ಇವೆ...
1 comment:
ಚೆನ್ನಾಗಿದೆ :)
Post a Comment