Monday, August 18, 2008

ಅಬ್ಬಾ ! ಅದೆಂಥಾ ರಭಸ

ಮೊನ್ನೆ ಮಂಗಳೂರಿನಲ್ಲಿ ಮಳೆ ಜೋರಾಗಿತ್ತು. ಜಿಲ್ಲೆಯ ಐದೂ ನದಿಗಳು ತುಂಬಿ ಹರಿಯುತ್ತಿದ್ದವು. ಅಲ್ಲಿ ದುರಂತವೊಂದು ಸಂಭವಿಸಿತ್ತು. ಶಾಲೆಗೆಂದು ಹೊರಟ ಮಕ್ಕಳು ಮರಳಿ ಮನೆಗೆ ಬರಲೇ ಇಲ್ಲ. ಫಲ್ಗುಣಿ ನದಿಯಲ್ಲಿ ಮುಳುಗಿದ ಅವರ ಶಾಲಾ ಬಸ್ಸುಆ ಮಕ್ಕಳ ಪ್ರಾಣವನ್ನೇ ಬಲಿ ತೆಗೆದುಕೊಂಡಿತ್ತು. ಸ್ವಾತಂತ್ರ್ಯೋತ್ಸವಕ್ಕೆ ಅಣಿಯಾಗುತ್ತಿದ್ದ ಮಕ್ಕಳು ಈ ಲೋಕವನ್ನೇ ಬಿಟ್ಟು ಹೋದರು.
ಆ ಮಕ್ಕಳು ಉಜ್ವಲ ಭವಿಷ್ಯವನ್ನು ಅರಸುತ್ತಾ ಶಾಲೆಗೆ ತೆರಳುತ್ತಿದ್ದರು. ಸ್ವಾತಂತ್ರ್ಯದ ಸಂಭ್ರಮ ಅವರಲ್ಲಿ ಮನೆ ಮಾಡಿತ್ತು... ಎಂದಿನಂತೆ ಶಾಲಾ ವಾಹನದಲ್ಲಿ ಕುಣಿಯುತ್ತಾ ನಲಿಯುತ್ತಾ ಹೋಗುತ್ತಿದ್ದರು. ಮಂಗಳೂರಿನ ಗುರುಪುರದ ಸಮೀಪ ಉಲ್ಲಾಯಿಬೆಟ್ಟಿನ ಬಾಮಿ ಬಳಿ ಅವರ ಬಸ್ಸು ಬರುತ್ತಿದ್ದಂತೆಯೇ ಅದು ಫಲ್ಗುಣಿ ನದಿಗೆ ಬತ್ತು. ನಿತ್ಯ ಫಲ್ಗುಣಿಯ ಹರಿವನ್ನು ನೋಡಿ ಖುಷಿ ಪಡುತ್ತಿದ್ದ ಮಕ್ಕಳಿಗೆ, ಗುರುವಾರ ಅದೇ ಫಲ್ಗುಣಿ ಮೃತ್ಯು ದೇವತೆಯಾಗಿ ಅವತರಿಸಿದ್ದಳು.
ಅ ಚಿತ್ರಗಳು ನನ್ನ ಕಣ್ಣ ಮುಂದೆ ಬಂದದ್ದೆ ತಡ, ಅರಿವಿಲ್ಲದೆ ನನ್ನ ಕಣ್ಣಲ್ಲಿ ಕಂಬನಿ ಹರಿಯ ತೊಡಗಿತ್ತು. ತುಂಬಾ ವರ್ಷದ ಬಳಿಕ ನಾನು ಬಾಲ್ಯದ ನೆನಪುಗಳನ್ನು ಮೆಲುಕು ಹಾಕತೊಡಗಿದೆ. ನಾನೂ ಅಷ್ಟೆ, ಚಿಕ್ಕವನಿದ್ದಾಗ ಚಡ್ಡಿ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದಾಗ, ಕೆರೆ ತೊರೆಗಳನ್ನು ದಾಟಿಕೊಂಡು ಹೋಗಬೇಕಿತ್ತು. ಕರಾವಳಿಯ ಮಳೆ ಅಂದರೆ, ಅದು ಭೋರ್ಗರೆತ. ಅದೂ ಹದಿನೈದು ವರ್ಷಗಳ ಹಿಂದಿನ ಮಳೆ. ಗುಡ್ಡ, ಕಾಡು ಮೇಡುಗಳನ್ನು ಹತ್ತಿ ಇಳಿದು ಶಾಲೆಗೆ ಹೋಗಬೇಕಿತ್ತು. ಒಂದೊಂದು ಸಲ ತೊರೆಗಳೆಲ್ಲ ತುಂಬಿ ಹರಿಯುತ್ತಿದ್ದವು. ಮಳೆ ನಿಂತು ಉಬ್ಬರ ಕಡಿಮೆಯಾದ ಬಳಿಕ ಮನೆ ತಲುಪಿ ಕೊಳ್ಳುತ್ತಿದ್ದೆವು. ಆ ಕಡೆಯಿಂದ ಅಜ್ಜ ಟಾರ್ಚು ಹಿಡಿದು ಕೊಂಡು ಬಂದ ದಿನಗಳೂ ಬಹಳಷ್ಟಿವೆ. ಮೊನ್ನೆಯ ಘಟನೆ ನೋಡಿದ ತಕ್ಷಣ ನನ್ನ ಮನಸ್ಸಿಗೆ ಬಂದದ್ದು ನಾನು ಬಾಲ್ಯದಲ್ಲಿ ಕಳೆದ ಆ ದಿನಗಳು. ಒಂದು ವೇಳೆ, ನಾನೂ ತೊರೆ ದಾಟುವಾಗ ಕೊಚ್ಚಿ ಹೋಗುತ್ತಿದ್ದರೆ ?

ಪಾಪ ಆ ಮಕ್ಕಳಿಗೆ ಬಸ್ಸಾದರೂ ಇತ್ತು. ನಾವು ನಡೆದುಕೊಂಡೇ ಬರಬೇಕಿತ್ತು. ಗುಡ್ಡದಿಂದ ನೀರು ಸರಾಗವಾಗಿ ಹರಿದು ಹೋಗುವ ಕರಣ, ಒಮ್ಮೆ ನೀರಿಗೆ ಬಿದ್ದರೆ ಸಾಕಿತ್ತು, ಅದರಿಂದ ಮೇಲೆಳುವುದಂತು ಸಾಧ್ಯವೇ ಇರಲಿಲ್ಲ. ಅಬ್ಬಾ ! ಅದನ್ನು ನೆನೆಸಿಕೊಂಡರೆ ಸಾಕು, ಮೈಎಲ್ಲ ಜುಮ್ ಅನ್ನುತ್ತದೆ. ಅ ಮಕ್ಕಳನ್ನು ನೋಡಿದಾಗ ನಂಗೆ ನೆನಪಾದದ್ದು ನನ್ನ ಬಾಲ್ಯ, ಆ ಭಯ. ಅದನ್ನು ನಿಮ್ಮ ಜೊತೆ ಹೇಳಿ ಕೊಳ್ಳಬೇಕಿತ್ತು ಅಷ್ಟೆ.

No comments: